ಸಹಜವಾಗಿ ಕಿವಿಯಲ್ಲಿ ಕಲ್ಲು, ಮಣ್ಣು ಅಥವಾ ಚಿಕ್ಕಪುಟ್ಟ ಹುಳಗಳು ಕಾಣಿಸಿಕೊಳ್ಳುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿಯಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ವೈದ್ಯರು ಸೇರಿದಂತೆ ನೆಟ್ಟಿಗರು ಗಾಬರಿ ಬಿದ್ದಿದ್ದಾರೆ.
ಹೌದು, ಈ ಘಟನೆ ಚೀನಾದಲ್ಲಿ ನಡೆದಿದ್ದು, ಮಹಿಳೆಯನ್ನು ಚೆನ್ ಎಂದು ಹೇಳಲಾಗಿದೆ. ಕಿವಿಯಲ್ಲಿ ನೋವು ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗಿದ್ದಾರೆ. ಆ ವೇಳೆ ವೈದ್ಯರು ಪರೀಕ್ಷಿಸಿ, ಕಿವಿಯಲ್ಲಿ ಯಾವುದೋ ವಸ್ತು ಇದೆ ಎಂದು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾದಾಗ ಜೀವಂತ ಜಿರಳೆ ಇರುವುದು ಕಾಣಿಸಿದೆ. ಕೂಡಲೇ ಜಿರಳೆಯನ್ನು ತೆಗೆಯದಿದ್ದರೆ ತಮಟೆಯ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಜಿರಳೆಯನ್ನು ತೆಗೆಯಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಮಹಿಳೆ ಮಾತನಾಡಿದ್ದು, ಕಿವಿಯಲ್ಲಿ ನೋವಿನೊಂದಿಗೆ ಏನೋ ಓಡಾಡಿದ ರೀತಿ ಭಾಸವಾಗುತ್ತಿತ್ತು. ಆದ್ದರಿಂದ ವೈದ್ಯರ ಬಳಿ ತೆರಳಿದಾಗ ವಿಷಯ ತಿಳಿಯಿತು ಎಂದಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಕಿವಿಯಲ್ಲಿ ಜಿರಳೆ ಏಕೆ ಹೋಯಿತು ಎಂದರೆ, ಇನ್ನು ಕೆಲವರು ಜಿರಳೆಯನ್ನು ತೆಗೆಯುತ್ತಿರುವುದಕ್ಕೆ ಗಾಬರಿ ಬಿದ್ದಿದ್ದಾರೆ.