ವಿವಾಹ ವಿಚ್ಛೇದನದ ಬಳಿಕ ಮಕ್ಕಳು ತನ್ನ ಕಸ್ಟಡಿಗೆ ಸಿಗಲಿಲ್ಲ ಎಂದು ನೊಂದಿದ್ದ ತಾಯಿಯೊಬ್ಬರು ಮಗುವಿನ ರೀತಿಯ ಗೊಂಬೆಗಳನ್ನ ಸಲಹುವ ಮೂಲಕ ಮಕ್ಕಳಿಲ್ಲದ ನೋವನ್ನ ಮರೆತಿದ್ದಾರೆ. ಈ ಕಾರಣದಿಂದಾಗಿಯೇ ಗೊಂಬೆಗಳ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ.
ವರ್ಜಿನಿಯಾದ 42ವರ್ಷದ ಮಹಿಳೆ ಲಿಜ್ ವಾಟ್ಸನ್ 2016ರಿಂದ ಗೊಂಬೆಗಳನ್ನ ಮಕ್ಕಳಂತೆ ಸಲಹುತ್ತಿದ್ದಾರೆ. ಮಕ್ಕಳು ದೂರಾದ ಬಳಿಕ ನೋವನ್ನ ಅನುಭವಿಸುತ್ತಿದ್ದ ಇವರು ಯುಟ್ಯೂಬ್ ವಿಡಿಯೋಗಳನ್ನ ನೋಡಿದ ಬಳಿಕ ಈ ಪ್ಲಾನ್ ಮಾಡಿದ್ದಾರೆ. ಇದೀಗ ಮನೆ ತುಂಬೆಲ್ಲ ಮಗುವಿನಂತ ಗೊಂಬೆಗಳು ತುಂಬಿ ಹೋಗಿವೆ.
ಈ ಗೊಂಬೆಗಳನ್ನ ಸಿಲಿಕಾನ್ನಿಂದ ಮಾಡಲಾಗಿದ್ದು ನೋಡೋಕೆ ಥೇಟ್ ಮಗುವಿನಂತೆಯೇ ಇರುತ್ತದೆ. ಈ ಗೊಂಬೆಗಳು ತಾನು ಮೊದಲ ಮದುವೆಯಿಂದ ಪಡೆದ ಎರಡು ಮಕ್ಕಳನ್ನ ನೆನೆದು ಆಗುವ ನೋವನ್ನ ಮರೆಯಿಸುತ್ತವೆ ಎಂದು ಲಿಜ್ ಹೇಳಿದ್ದಾರೆ.
2010ರಲ್ಲಿ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಲಿಜ್ 2013ರಲ್ಲಿ ಎರಡನೆಯ ಪತಿಯ ಜೊತೆಗೆ ಮೊದಲ ಮದುವೆಯಿಂದ ಪಡೆದ ಇಬ್ಬರು ಮಕ್ಕಳ ಜೊತೆ ಬೇರೆ ದೇಶದಲ್ಲಿ ಇರಲು ಆರಂಭಿಸಿದ್ರು. ಆದರೆ ಇಬ್ಬರು ಮಕ್ಕಳಿಗೆ ಈ ಹೊಸ ಜೀವನಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಇಬ್ಬರು ಮಕ್ಕಳನ್ನು ಮೊದಲ ಪತಿಯ ಮನೆಗೆ ಕಳಿಸಿಕೊಡುವಂತಹ ಗಟ್ಟಿ ನಿರ್ಧಾರವನ್ನ ಲಿಜ್ ತೆಗೆದುಕೊಳ್ಳಲೇಬೇಕಾಯ್ತು.
ಇದಾದ ಬಳಿಕ ಲಿಜ್ ಗೊಂಬೆಗಳೊಂದಿಗೆ ಇರಲು ಆರಂಭಿಸಿದ್ರು. 2016ರಲ್ಲಿ ಮೊಟ್ಟ ಮೊದಲ ಗೊಂಬೆಯನ್ನ ಖರೀದಿ ಮಾಡಿದ್ರು. ಇದೀಗ ಲಿಜ್ ಬಳಿ 9 ಮಗು ರೂಪದ ಗೊಂಬೆಗಳಿವೆ. ಇದರಲ್ಲಿ ಎರಡು ಗೊಂಬೆಗಳಿಗೆ ತಮ್ಮ ಸ್ವಂತ ಮಕ್ಕಳ ಹೆಸರನ್ನೇ ಲಿಜ್ ಇಟ್ಟಿದ್ದಾರೆ.