ಹೊಸ ವರ್ಷದ ಮೊದಲ ತಿಂಗಳಲ್ಲೇ ಟೆಕ್ ಸಮರ ದೊಡ್ಡ ಮಟ್ಟಕ್ಕೆ ಹೋಗಿದ್ದು, ಇನ್‌ಸ್ಟಂಟ್ ಮೆಸೇಜಿಂಗ್ ಕಿರುತಂತ್ರಾಂಶ ವಾಟ್ಸಾಪ್ ಹಾಗೂ ಇಂಥದ್ದೇ ಹೊಸ ಆಪ್ ಸಿಗ್ನಲ್‌ಗಳು ಸುದ್ದಿ ಮಾಡುತ್ತಿವೆ. ತನ್ನ ಹೊಸ ಶರತ್ತುಗಳಿಗೆ ಒಪ್ಪಿಗೆ ಕೊಡದೇ ಹೋದಲ್ಲಿ ತನ್ನ ಸೇವೆಗಳನ್ನು ಫೆಬ್ರವರಿ 8ರಿಂದ ಮುಂದುವರೆಸಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಹೇಳುತ್ತಲೇ ಬಂದಿದೆ.
ಈ ವಿಚಾರವಾಗಿ ವಾಟ್ಸಾಪ್ ಮೇಲೆ ಮುನಿಸಿಕೊಂಡಿರುವ ವಾಟ್ಸಾಪ್ ಬಳಕೆದಾರರು ಹೊಸ ಪರ್ಯಾಯವೊಂದನ್ನು ಹುಡುಕಿಕೊಂಡಿದ್ದಾರೆ. ಅವರ ನೆರವಿಗೆ ಬಂದಿದೆ ನೋಡಿ ಸಿಗ್ನಲ್…! ಜನವರಿ 6ರಿಂದ ಜನವರಿ 10ರ ವರೆಗಿನ ಅವಧಿಯಲ್ಲಿ 23 ಲಕ್ಷ ಮಂದಿ ಹೊಸದಾಗಿ ಸಿಗ್ನಲ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಸೆನ್ಸಾರ್ ಟವರ್ ಅನಲಿಟಿಕ್ಸ್ ಸಂಸ್ಥೆಯ ದತ್ತಾಂಶ ತಿಳಿಸುತ್ತಿದೆ.
ಅಂದಹಾಗೆ ಈ ಸಿಗ್ನಲ್ ಹಿಂದಿನ ವ್ಯಕ್ತಿ ಯಾರು ಎಂಬ ಪ್ರಶ್ನೆ ನಿಮ್ಮ ತಲೆಗೆ ಬಂದಿರಬಹುದು. ಹಿಂದೊಮ್ಮೆ ವಾಟ್ಸಾಪ್ ಅನ್ನು ಹುಟ್ಟುಹಾಕಲು ಕಾರಣರಾಗಿದ್ದ ಬ್ರಯಾನ್ ಆಕ್ಟನ್..!
ಮಿಚಿಗನ್‌ನಲ್ಲಿ 1972ರಲ್ಲಿ ಜನಿಸಿದ ಬ್ರಯಾನ್ ಆಕ್ಟನ್, 1994ರಲ್ಲಿ ಸ್ಟಾನ್‌ಫೋರ್ಡ್ ವಿವಿಯಲ್ಲಿ ಗಣಕ ವಿಜ್ಞಾನ ಪದವಿ ಪೂರೈಸಿದ್ದಾರೆ. ಅವರೀಗ ಸಿಗ್ನಲ್ ಪ್ರತಿಷ್ಟಾನದ ಕಾರ್ಯನಿರ್ವಾಹಕ ಚೇರ್ಮನ್ ಆಗಿದ್ದಾರೆ. 2018ರಲ್ಲಿ ಆಕ್ಟನ್ ಅವರು ಮೋಕ್ಸಿ ಮರ್ಲಿನ್‌ಸ್ಪೈಕ್ ಜೊತೆಗೂಡಿ ಸಿಗ್ನಲ್ ಸ್ಥಾಪಿಸಿದ್ದಾರೆ.
ಜಾನ್ ಕೌಮ್ ಜೊತೆ ಸೇರಿ ಆಕ್ಟನ್ ವಾಟ್ಸಾಪ್ ಅಭಿವೃದ್ಧಿಪಡಿಸಿದ್ದರು. ಈ ಮೆಸೇಜಿಂಗ್ ಕಿರುತಂತ್ರಾಶವನ್ನು ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಫೇಸ್ಬುಕ್ 2014ರಲ್ಲಿ $19 ಶತಕೋಟಿಗೆ ಖರೀದಿ ಮಾಡಿತ್ತು.
ವಾಟ್ಸಾಪ್ ಸೇವೆಗಳಿಗೆ ಶುಲ್ಕ ವಿಧಿಸಬೇಕೆಂಬ ಫೇಸ್ಬುಕ್ ಆಲೋಚನೆಯ ವಿರುದ್ಧ ಅಸಮಾಧಾನಗೊಂಡ ಆಕ್ಟನ್ ಸೆಪ್ಟೆಂಬರ್ 2017ರಲ್ಲಿ ವಾಟ್ಸಾಪ್ ತೊರೆದು, ಸಿಗ್ನಲ್ ಪ್ರತಿಷ್ಠಾನದಲ್ಲಿ ಕೆಲಸ ಆರಂಭಿಸಿದ್ದರು.