ವರ್ಮಾಂಟ್: ಅಮೆರಿಕದ ವ್ಯಕ್ತಿಯೊಬ್ಬ ಯಾರೊಬ್ಬರ ಸಹವಾಸಕ್ಕೂ ಸಿಲುಕದೆ ಬರೋಬ್ಬರಿ ಎರಡೂವರೆ ತಿಂಗಳು ಏಕಾಂತ ವಾಸದಲ್ಲಿದ್ದು, ಬಳಿಕ ಹೊರಬಂದು ಪ್ರಪಂಚಕ್ಕೆ ಮತ್ತೆ ತೆರೆದುಕೊಂಡಿದ್ದಾನೆ. ಆಗ ಆತ ಟ್ವೀಟ್ ಮೂಲಕ ಕೇಳಿಕೊಂಡಿದ್ದೇನು ಗೊತ್ತಾ..?
ಈ 75 ದಿನಗಳಲ್ಲಿ ನಾನು ಏನಾದರೂ ಕಳೆದುಕೊಂಡೆನಾ..? ಎಂದು ಆತ ಟ್ವೀಟ್ ಮೂಲಕ ಪ್ರಶ್ನಿಸಿದ್ದಾನೆ. ಮೊನಾಸ್ಟಿಕ್ ಅಕಾಡೆಮಿಯ ಸದಸ್ಯ ಡ್ಯಾನಿಯಲ್ ಥೋರ್ಸನ್ ಎಂಬಾತನೇ ಹೀಗೆ ಬರೆದುಕೊಂಡಾತ. ಇಷ್ಟಕ್ಕೂ ಈತ ಹೀಗೆ ಬಾಹ್ಯ ಜಗತ್ತಿನ ಜೊತೆಗೆ ಸಂಪರ್ಕ ಕಡಿದುಕೊಳ್ಳಲು ಪ್ರಮುಖ ಕಾರಣ ಕೊರೋನಾ ವೈರಸ್ ಸೋಂಕು.
ಅಮೆರಿಕದಲ್ಲಿ ಲಕ್ಷಾಂತರ ಮಂದಿ ಕೋವಿಡ್-19 ಸೋಂಕಿಗೆ ಸಾವನ್ನಪ್ಪುತ್ತಿರುವುದನ್ನು ಕಂಡು ಹೆದರಿದ ಈತ ತಾನಾಗಿಯೇ ನಿರ್ಧರಿಸಿ ಸೆಲ್ಫ್ ಐಸೋಲೇಷನ್ ಗೆ ಒಳಪಟ್ಟಿದ್ದ. ತಾನು ಕೆಲಸ ಮಾಡುತ್ತಿರುವ ವರ್ಮಾಂಟ್ ನ ಈಶಾನ್ಯ ಭಾಗದಲ್ಲಿರುವ ಬುದ್ದಿಸ್ಟ್ ಮೋನೆಸ್ಟಿಕ್ ಅಕಾಡೆಮಿ ಆವರಣದಲ್ಲಿ ಐಸೋಲೇಷನ್ ಗೆ ತನ್ನನ್ನು ತಾನು ಒಳಪಡಿಸಿಕೊಂಡಿದ್ದ. “ನಾನು ಬಾಹ್ಯ ಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡಿದ್ದೆ. ಯಾವುದೇ ಸುದ್ದಿ ವಾಹಿನಿಗಳನ್ನೂ ನೋಡುತ್ತಿರಲಿಲ್ಲ. ಆದರೆ, ಎರಡು ದಿನಕ್ಕೊಮ್ಮೆ ಇಲ್ಲಿಯ ಉಪನ್ಯಾಸಕರೊಬ್ಬರನ್ನು ಭೇಟಿ ಮಾಡಿ, ನನ್ನ ಕುಟುಂಬದವರು, ಸ್ನೇಹಿತರು ಆರೋಗ್ಯವಾಗಿದ್ದಾರಾ ಎಂಬುದನ್ನಷ್ಟೇ ತಿಳಿಯುತ್ತಿದ್ದೆ’’ ಎಂದು 75 ದಿನಗಳ ಬಳಿಕ ಸುದ್ದಿವಾಹಿನಿಗೆ ಹೇಳಿಕೊಂಡಿದ್ದಾನೆ. ಬಳಿಕ ಈ 75 ದಿನಗಳಲ್ಲಿ ನಾನು ಏನನ್ನಾದರೂ ಕಳೆದುಕೊಂಡಿದ್ದೀನಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾನೆ. ಇದಕ್ಕೆ ನೆಟ್ಟಿಗರಿಂದಲೂ ಧನಾತ್ಮಕ ಕಮೆಂಟ್ ಗಳು ಬಂದಿವೆ.