ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಪ್ರತಿಯೊಬ್ಬರ ಹಕ್ಕು. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮನ್ನು ಯಾರು ಆಳಬೇಕು ಎನ್ನುವ ಬಗ್ಗೆ ನಿರ್ಧರಿಸುವ ಮಹತ್ವದ ಸಂಗತಿಯೇ ಮತದಾನ. ಇಷ್ಟು ದಿನ ನೀವು ಮನುಷ್ಯರು ಮತದಾನ ಮಾಡುವುದನ್ನು ಕೇಳಿದ್ದಿರಿ. ಆದರೆ ಬೆಕ್ಕಿಗೂ ಮತದಾನದ ಅವಕಾಶಕ್ಕೆ ಮನವಿ ಮಾಡಿದ್ದರೆ..?
ಹೌದು, ಅಚ್ಚರಿಯಾದರೂ ಇದು ಸತ್ಯ. ಅಮೆರಿಕದ ಅಟ್ಲಾಂಟ ಭಾಗದಲ್ಲಿ 18 ವರ್ಷ ಪೂರೈಸಿದ ಕೋಡಿ ಎನ್ನುವ ಬೆಕ್ಕಿಗೆ ಮತದಾನದ ಹಕ್ಕನ್ನು ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ಹೆಸರಿನ ಬೆಕ್ಕು ಮರಣ ಹೊಂದಿ ಆಗಲೇ 12 ವರ್ಷವಾಗಿದೆ ಎನ್ನುವುದು ಅಚ್ಚರಿಯ ವಿಷಯ.
ಈ ಬಗ್ಗೆ ಕೋಡಿಯ ಮಾಲೀಕರು ಮಾತನಾಡಿದ್ದು, ಒಂದು ವೇಳೆ ನಮ್ಮ ಪ್ರೀತಿಯ ಬೆಕ್ಕು ಬದುಕಿದ್ದು, ಮತದಾನ ಚಲಾಯಿಸಲು ಅವಕಾಶ ನೀಡಿದ್ದರೆ, ಖಂಡಿತವಾಗಿಯೂ ಮತದಾನ ಮಾಡಿಸುವುದಕ್ಕೆ ಅವಕಾಶ ಕೊಡುತ್ತಿದ್ದೆವು. ಆದರೆ ದುರಾದೃಷ್ಟವಶಾತ್ ಬೆಕ್ಕು 2008ರಲ್ಲಿಯೇ ಕೊನೆಯುಸಿರೆಳೆದಿದೆ ಎಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ಈ ಬೆಕ್ಕಿನ ಮತದಾನದ ಹಕ್ಕನ್ನು ಅದರ ಮಾಲೀಕರು ಸಲ್ಲಿಸಿರುವುದು ಅನುಮಾನ. ಬದಲಿಗೆ ಯಾವುದಾದರೂ ಗುಂಪೊಂದು ಈ ಕೆಲಸಕ್ಕೆ ಕೈಹಾಕಿರಬಹುದು ಎಂದು ಹೇಳಿದ್ದಾರೆ.