ಆನ್ಲೈನ್ ನಲ್ಲಿ ಯಾವುದೇ ವಸ್ತುವನ್ನು ಆರ್ಡರ್ ಮಾಡಿದರೂ ಸಹ ಒಂದೊಳ್ಳೆ ಪ್ಯಾಕೇಜಿಂಗ್ ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿ ಎಂದು ನೀವು ಆಶಿಸುವುದು ಸಹಜ. ಆದರೆ ಪ್ಯಾಕಿಂಗ್ ಸರಿ ಇಲ್ಲವಾದಲ್ಲಿ ನೀವು ರೀಫಂಡ್ ಅಥವಾ ರಿಪ್ಲೇಸ್‌ಮೆಂಟ್‌ಗೆ ಕೇಳುವುದಿಲ್ಲವೇ?
ಅದರಲ್ಲೂ, ಕೆಲವೊಂದು ವಸ್ತುಗಳನ್ನು ಬಹಳ ಹುಶಾರಾಗಿ ಡೆಲಿವರ್ ಮಾಡಲು ಅವುಗಳ ಪ್ಯಾಕೇಜಿಂಗ್ ಮೇಲೆಯೇ ಬರೆದಿರಲಾಗುತ್ತದೆ. ಈ ಮೂಲಕ ಗ್ರಾಹಕನಿಗೆ ಆ ವಸ್ತುವನ್ನು ಇನ್ನಷ್ಟು ಜಾಗರೂಕತೆಯಿಂದ ಡೆಲಿವರ್ ಮಾಡಬೇಕಾಗುತ್ತದೆ. ಆದರೆ ಎಲ್ಲಾ ಡೆಲಿವರಿಗಳೂ ಹೀಗೇ ನಾಜೂಕಾಗಿ ಆಗಿಬಿಡುತ್ತವೆ ಎಂದು ಹೇಳಲು ಬಾರದು.
‘fragile’ ಎಂದು ಪಾರ್ಸಲ್‌ನ ಮೇಲೆ ಲೇಬಲ್ ಅಂಟಿಸಿದ್ದರೂ ಸಹ ಅದನ್ನು ಅಜಾಗರೂಕತೆಯಿಂದ ಆರು ಅಡಿ ಗೋಡೆಯ ಮೇಲಿಂದ ಎಸೆಯುತ್ತಿರುವ ಡೆಲಿವರಿ ಬಾಯ್ ಒಬ್ಬರ ಚಿತ್ರವೊಂದು ವೈರಲ್ ಆಗಿದೆ. ಆನ್ಲೈನ್ ದಿಗ್ಗಜ ಇಬೇನಲ್ಲಿ $810 ತೆತ್ತು ಖರೀದಿ ಮಾಡಲಾದ ಫ್ಯಾಬ್ರಿಕ್ ಪ್ರಿಂಟರ್ ಆ ಪ್ಯಾಕೇಜ್‌ನಲ್ಲಿ ಇತ್ತೆಂದು ವರದಿಗಳಿಂದ ತಿಳಿದುಬಂದಿದೆ. ಡೆಲಿವರಿ ಬಾಯ್‌ನ ಈ ಬೇಜವಾಬ್ದಾರಿ ನಡೆಯಿಂದ ಪ್ರಿಂಟರ್ ರಿಪೇರಿ ಮಾಡಲಾಗದಷ್ಟು ಮುರಿದುಹೋಗಿಬಿಟ್ಟಿದೆ.
ಈ ಬಗ್ಗೆ ಕೊರಿಯರ್ ಕಂಪನಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗದ ಕಾರಣ ಗ್ರಾಹಕ ಜೊನಾಥ್ ವಾರ್ಡ್, ತಮ್ಮ ಅಸಹಾಕಯಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾರೆ. ಅವರಿಗೆ ಎಕ್ಸ್‌ಪ್ರೆಸ್ ಡೆಲಿವರಿ ಚಾರ್ಜ್ ಆದ $23ಗಳನ್ನು ಮಾತ್ರವೇ ರೀಫಂಡ್ ಮಾಡಲಾಗಿದೆ. ಘಟನೆ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತಪ್ಪು ನಡೆದಿದ್ದು ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೊರಿಯರ್ ಸಂಸ್ಥೆ ತಿಳಿಸಿದೆ.