ವಿಶ್ವದಲ್ಲಿ ಕೊರೊನಾ ವ್ಯಾಪಕವಾಗುತ್ತಿರುವ ಮಧ್ಯೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ಅನಿವಾರ್ಯ ಕಾರಣಗಳಿಂದ ಎಲ್ಲ ಚಟುವಟಿಕೆಗಳು ಎಂದಿನಂತೆ ಆರಂಭವಾಗುತ್ತಿವೆ. ಆರಂಭದಲ್ಲಿ ಲಾಕ್ ಡೌನ್ ಘೋಷಿಸಿದ್ದ ವಿಶ್ವದ ಬಹುತೇಕ ರಾಷ್ಟ್ರಗಳು ಈಗ ನಿಯಮಗಳನ್ನು ಸಡಿಲಿಕೆ ಮಾಡುತ್ತಿವೆ.
ಹೀಗಾಗಿ ದಂತ ಚಿಕಿತ್ಸಾಲಯಗಳು ಸಹ ಕಾರ್ಯಾರಂಭ ಮಾಡಲು ಆರಂಭಿಸಿದ್ದು, ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಅನಿವಾರ್ಯವಲ್ಲದ ಸಂದರ್ಭವನ್ನು ಹೊರತುಪಡಿಸಿ ಉಳಿದ ವೇಳೆ ವ್ಯಕ್ತಿಯ ಹತ್ತಿರದಿಂದ ಚಿಕಿತ್ಸೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದೆ.
ಹಾಗೊಮ್ಮೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾದ ಪಕ್ಷದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದೆ. ಕೊರೊನಾ ವೈರಸ್ ಹರಡುವಿಕೆ ಕುರಿತು ಇನ್ನೂ ಖಚಿತವಾಗಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಕಾರಣ ಚಿಕಿತ್ಸೆ ವೇಳೆ ಎಚ್ಚರಿಕೆ ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.