ಲಾಕ್‌ಡೌನ್ ನಿಂದ ಪರಿಸರ ಮಾಲಿನ್ಯ ತುಂಬಾ ಕಡಿಮೆಯಾಗಿದೆ. ನದಿಗಳು ಸ್ವಚ್ಛವಾಗುತ್ತಿವೆ. ನೂರಾರು ಕಿಮೀ ದೂರದ ಗುಡ್ಡಗಳು ಕಾಣಲಾರಂಭಿಸಿವೆ ಎಂಬ ಸಾಕಷ್ಟು ಮಾಧ್ಯಮ ವರದಿಗಳು ಬಂದಿದ್ದವು.
ಆದರೆ, ಶುಕ್ರವಾರ ಪ್ರಕಟವಾದ ತಜ್ಞರ ವರದಿ ಬೇರೆಯದನ್ನೇ ಹೇಳಿದೆ. ಲಾಕ್‌ಡೌನ್, ಪರಿಸರ ಹಾನಿಗೆ ಅಂಥ ದೊಡ್ಡ ಕೊಡುಗೆಯೇನೂ ನೀಡಿಲ್ಲ. ಇದೇ ರೀತಿ 2021 ರವರೆಗೂ ಸಂಚಾರ ನಿಯಂತ್ರಣವಿದ್ದರೂ 2030 ರ ಹೊತ್ತಿಗೆ ಗ್ಲೋಬಲ್ ವಾರ್ಮಿಂಗ್ ಶೇ. 0.01 ರಷ್ಟು ಕಡಿಮೆಯಾಗಬಹುದಷ್ಟೆ ಎಂದು ವರದಿ ಹೇಳಿದೆ.
ಬಾಹ್ಯ ಮೂಲಗಳಿಂದ ಸಿಕ್ಕಿದ ಡೇಟಾಗಳನ್ನು ಆಧರಿಸಿ ತಜ್ಞರ ತಂಡ 120 ದೇಶದಲ್ಲಿ 10 ವಿಭಿನ್ನ ಹಸಿರುಮನೆ ಅನಿಲಗಳು ಫೆಬ್ರವರಿಯಿಂದ ಜೂನ್ ನಡುವೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಪರಿಶೀಲಿಸಿದೆ.
ಕಾರ್ಬನ್ ಡೈಯಾಕ್ಸೈಡ್ ಹಾಗೂ ನೈಟ್ರೋಜನ್ ಆಕ್ಸೈಡ್ ಗಳು ಶೇ.10 ರಿಂದ 30 ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ಆದರೆ, ಇವು ತಾತ್ಕಾಲಿಕವಾಗಿವೆ. ಮತ್ತೆ ಅವು ಏರಿಕೆಯಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಧ್ಯಯನ ವರದಿ ನೇಚರ್ ಕ್ಲೈಮೇಟ್ ಚೆಂಜ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.