ಕೊರೋನಾ ವೈರಸ್ ಉಪಟಳ ಇತ್ತೀಚೆಗೆ ವ್ಯಾಪಕವಾಗುತ್ತಿರುವ ಕಾರಣ ಅಮೆರಿಕದಲ್ಲಿ ಭಾರೀ ಸಂಕಟಮಯ ಪರಿಸ್ಥಿತಿ ನೆಲೆಸಿದೆ. ಆಸ್ಪತ್ರೆಗಳು, ಐಸಿಯು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಭರ್ತಿಯಾಗಿವೆ.
ಕ್ಯಾಲಿಫೋರ್ನಿಯಾ ಹಾಗೂ ನೆವೆಡಾ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಪಣಗೊಂಡಿದ್ದು, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಬಳಿಕ ಕೋವಿಡ್-19 ಸೋಂಕಿತರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದೆ. ಪ್ರತಿಯೊಂದು ಆಸ್ಪತ್ರೆಯೂ ಸಹ ಸಾಮರ್ಥ್ಯದ ಮೂರರಷ್ಟು ರೋಗಿಗಳನ್ನು ಕಾಣುತ್ತಿದ್ದು ಜೀವ ಉಳಿಸಲು ಅಗತ್ಯವಾದ ಆಮ್ಲಜನಕದಂಥ ಪೂರೈಕೆಯನ್ನು ಮಾಡಲು ಸಹ ಪರದಾಡುತ್ತಿವೆ.
ನೆವೆಡಾದ ರೋಸ್ ಡೊಮಿನಿಕನ್ ಆಸ್ಪತ್ರೆಯಲ್ಲಿ ಐಸಿಯು ರೋಗಿಗಳ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಹೆಚ್ಚಳವಾಗಿರುವ ಕಾರಣ ವಿಪತ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ತೀರಾ ಅನಿವಾರ್ಯವಲ್ಲದ ಸರ್ಜರಿಗಳನ್ನು ಸಸ್ಪೆಂಡ್ ಮಾಡುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಲು ಆಸ್ಪತ್ರೆಗೆ ಅಧಿಕಾರ ಇರಲಿದೆ. ಇಂಥದ್ದೇ ಪರಿಸ್ಥಿತಿ ಎರಡೂ ರಾಜ್ಯಗಳ ಬಹುತೇಕ ಎಲ್ಲ ದೊಡ್ಡ ಆಸ್ಪತ್ರೆಗಳಲ್ಲೂ ನೆಲೆಸಿದೆ.