ಒಮ್ಮೆ ಕೊರೊನಾ ಸೋಂಕು ಬಂತು ಅಂದರೆ ಸಾಕು. ಅದರಿಂದ ಪಾರಾಗೋದೇ ಒಂದು ದೊಡ್ಡ ಸವಾಲು. ಅಂತದ್ರಲ್ಲಿ ನೀವು ಕೊರೊನಾ ಜಯಿಸೋದ್ರಲ್ಲಿ ಯಶಸ್ವಿಯಾದರೆ ಮುಂದಿನ 6 ತಿಂಗಳು ವೈರಸ್ನಿಂದ ನಿಮ್ಮ ದೇಹ ಸೇಫ್ ಆಗಿರುತ್ತೆ ಎಂದು ಹೇಳುತ್ತೆ ಅಧ್ಯಯನ.
ಆದರೆ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾತ್ರ ಈ ಮಾತು ಅನ್ವಯವಾಗೋಲ್ಲ ಎಂದು ಹೇಳಿದೆ ಹೊಸ ಅಧ್ಯಯನ. ಡೆನ್ಮಾರ್ಕ್ನ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಕೊರೊನಾ ಮರುಸೋಂಕಿನ ಅಪಾಯದಿಂದ 65 ವರ್ಷದ ಒಳಗಿನ ಮಂದಿ 80 ಪ್ರತಿಶತ ಸುರಕ್ಷಿತವಾಗಿ ಇರ್ತಾರೆ. ಆದರೆ 65 ವರ್ಷ ಮೇಲ್ಪಟ್ಟವರಲ್ಲಿ ಈ ಸಾಧ್ಯತೆ ಕೇವಲ 47 ಪ್ರತಿಶತ ಮಾತ್ರ ಎಂದು ಹೇಳಲಾಗಿದೆ.
ಕೊರೊನಾ ಮೊದಲ ಅಲೆ ಅಂದರೆ ಕಳೆದ ವರ್ಷ ಮಾರ್ಚ್ ಹಾಗೂ ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದವರ ಪೈಕಿ ಕೇವಲ 0.65 ಪ್ರತಿಶತ ಮಂದಿ ಸೆಪ್ಟೆಂಬರ್ನಿಂದ ಡಿಸೆಂಬರ್ ತಿಂಗಳಲ್ಲಿ ಇದ್ದ ಎರಡನೇ ಅಲೆ ವೇಳೆ ಮರುಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾ ಮೊದಲನೆ ಅಲೆ ವೇಳೆ ಸೋಂಕಿಗೆ ಒಳಗಾದ 65 ವರ್ಷದೊಳಗಿನವರ ಪೈಕಿ 0.65 ಪ್ರತಿಶತ ಮಂದಿ ಎರಡನೆ ಅಲೆ ವೇಳೆ ಮರುಸೋಂಕಿಗೆ ಒಳಗಾಗಿದ್ದಾರೆ ಎಂದು ಅಧ್ಯಯನ ಹೇಳಿದೆ.
ಈ ಹಿಂದೆ ಕೊರೊನಾ ನೆಗೆಟಿವ್ ಬಂದು ಎರಡನೆ ಅಲೆ ವೇಳೆ ಸೋಂಕಿಗೆ ಒಳಗಾದ 65 ವರ್ಷದ ಒಳಗಿನವರ ಪ್ರಮಾಣ 3.60 ಪ್ರತಿಶತದಷ್ಟಿದೆ.
65 ವರ್ಷ ಮೇಲ್ಪಟ್ಟ ವೃದ್ಧರು ಮಾತ್ರ ಕೊರೊನಾ ಮರುಸೋಂಕಿಗೆ ಒಳಗಾಗುವ ಅಪಾಯವನ್ನ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. ಕೊರೊನಾ ಮೊದಲನೆ ಅಲೆ ವೇಳೆ ಸೋಂಕಿಗೆ ಒಳಗಾದ ವೃದ್ಧರ ಪೈಕಿ 0.88 ಪ್ರತಿಶತ ಮಂದಿ ಎರಡನೆ ಅಲೆ ವೇಳೆ ಮರುಸೋಂಕಿಗೆ ಒಳಗಾಗಿದ್ದಾರೆ.
ಈ ಮೊದಲು ಕೊರೊನಾ ಸೋಂಕಿಗೆ ಒಳಗಾಗದ 65 ವರ್ಷ ಮೇಲ್ಪಟ್ಟವರ ಪೈಕಿ 2 ಪ್ರತಿಶತ ಮಂದಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ.
ಮರುಸೋಂಕಿನಿಂದ ಪಾರಾಗೋಕೆ ಏನು ಮಾಡಬೇಕು ಅನ್ನೋದಕ್ಕೆ ನಿಖರವಾಗಿ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಈ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಅಧ್ಯಯನವನ್ನ ನಡೆಸುತ್ತಿದ್ದಾರೆ.