ಕೋವಿಡ್ ಲಾಕ್‌ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್‌ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್‌ನ ಈ ಜೋಡಿಯು ಹೊಸ ಕಾರ್ಡ್ ಗೇಮ್ ಒಂದನ್ನು ಮಾರಾಟ ಮಾಡುತ್ತಾ ಈ ಅವಧಿಯನ್ನು ಬಳಸಿಕೊಂಡಿದೆ.
ಭಾರೀ ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಗ್ರಾಂಟ್ ಹಾಗೂ ಜೋರ್ಡಾನಾ ಸ್ಯಾಂಡರ್ಸನ್ ತಮ್ಮ ಉದ್ಯಮವನ್ನು ಚಾಲ್ತಿಯಲ್ಲಿಡಲು ಸಾಲ ಮಾಡಬೇಕಾಗಿ ಬಂದಿತ್ತು. ಇಬ್ಬರೂ ಗೃಹಸ್ಥಾಶ್ರಮ ಪ್ರವೇಶಿಸಿದ ಬಳಿಕ ಅವರ ಸಮಸ್ಯೆಗಳು ನಿಧಾನವಾಗಿ ಅಂತ್ಯವಾಗುತ್ತಾ ಬಂದವು. 2016ರ ಡಿಸೆಂಬರ್‌ನಲ್ಲಿ ಇಬ್ಬರೂ ಕುಳಿತುಕೊಂಡು ಸೃಷ್ಟಿಸಿದ ಹೊಸ ಗೇಮ್ ಒಂದು ಮೂರು ವರ್ಷಗಳ ಬಳಿಕ ಅವರ ನೆರವಿಗೆ ಬಂದಿದೆ.
ಕಳೆದ ಮಾರ್ಚ್‌ನಿಂದ ಚಾಲ್ತಿಯಲ್ಲಿರುವ ಲಾಕ್‌ಡೌನ್ ಅವಧಿಯಲ್ಲಿ ’ಶಾಟ್ ಇನ್ ದ ಡಾರ್ಕ್’ ಎಂಬ ಹೊಸ ಕಾರ್ಡ್ ಗೇಮ್ ಪರಿಚಯಿಸಿದ ಈ ಜೋಡಿ, ಇದರಿಂದ ಬಂಪರ್ ಲಾಭ ಗಳಿಸುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಬೆಸ್ಟ್ ಸೆಲ್ಲರ್ ಆಗಿರುವ ಈ ಗೇಮ್, ಪ್ರತಿ ತಿಂಗಳು 20,000 ಪೌಂಡ್‌ಗಳಷ್ಟು ಸಂಪಾದನೆ ಮಾಡಿಕೊಡುತ್ತಿದೆ. ಕಳೆದ ಮಾರ್ಚ್-ಡಿಸೆಂಬರ್ ಅವಧಿಯಲ್ಲಿ ಈ ಗೇಮ್‌ನ 70000 ಘಟಕಗಳು ಮಾರಾಟವಾಗಿದ್ದು, ಇದರಿಂದಲೇ 850,000 ಪೌಂಡ್‌ಗಳ ಸಂಪಾದನೆ ಆಗಿದೆ.