ವಾತಾವರಣದಲ್ಲಿ ಆರ್ದ್ರತೆ ಹೆಚ್ಚು ಇರುವ ಸಂದರ್ಭದಲ್ಲಿ ಮಾನವನ ಎಂಜಲು ಅಥವಾ ಬಾಯಿಯ ದ್ರವದ ಹನಿಗಳು (ರೆಸ್ಪರೇಟರಿ ಡ್ರಾಪ್ ಲೆಟ್ಸ್) ಹೆಚ್ಚು ದೂರ ಕ್ರಮಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ.
ಅಮೇರಿಕಾದ ಭಾರತೀಯ ಮೂಲದ ವಿಜ್ಞಾನಿಗಳು ಒಂದು ಸಂಶೋಧನೆ ಮಾಡಿದ್ದು, ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾದರಿಯೊಂದನ್ನು ಸಿದ್ಧ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಅಭಿಷೇಕ್ ಸಹಾ ನೇತೃತ್ವದ ತಂಡ ಈ ಅಧ್ಯಯನ ಕೈಗೊಂಡಿದ್ದು, ಫಿಜಿಕ್ಸ್ ಫ್ಲ್ಯೂಡ್ಸ್ ಎಂಬ ಜರ್ನಲ್ ನಲ್ಲಿ ಈ ಸಂಶೋಧನೆ ಪ್ರಕಟವಾಗಿದೆ.
ಘರ್ಷಣಾ ದರ ಸಿದ್ಧಾಂತ ಅಥವಾ ರಾಸಾಯನಿಕ
ಮೂಲ ಸಂಪರ್ಕದ ಆಧಾರದ ಮೇಲೆ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ. ಜನಸಂಖ್ಯೆಯ ಪ್ರಮಾಣದ ಆಧಾರದ ಮೇಲೆ ವೈರಸ್ ಎಷ್ಟರ ಮಟ್ಟಿಗೆ ಹರಡಬಲ್ಲದು? ಎಷ್ಟು ಹೊತ್ತು ಜೀವಂತ ಇರಬಲ್ಲದು? ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.
ಒಬ್ಬ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವಾತಾವರಣದಲ್ಲಿ ಇರುವ ಆರ್ದ್ರತೆ ಹಾಗೂ ಗಾಳಿಯ ವೇಗದ ಆಧಾರದ ಮೇಲೆ ಎಂಜಲ ಹನಿಗಳು ಗರಿಷ್ಠ 13 ಅಡಿಯವರೆಗೂ ಹೋಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಅಂದರೆ, ಕೊರೋನಾ ತಡೆಯಲು ಮಳೆ ಅಥವಾ ಚಳಿಗಾಲದಲ್ಲಿ ಈಗ ಇರುವ 6 ಅಡಿ ಪರಸ್ಪರ ಅಂತರ ಸಾಕಾಗದು, ಜನ ಸಾಂದ್ರತೆ ಹೆಚ್ಚು ಇರುವೆಡೆಗಳಲ್ಲಿ ಚಳಿಗಾಲದಲ್ಲಿ ಕೊರೋನಾ ಪ್ರಭಾವ ಇನ್ನಷ್ಟು ಹೆಚ್ಚಬಹುದು ಎಂಬುದನ್ನು ಅಧ್ಯಯನ ಸಾಬೀತು ಮಾಡಿದೆ.