ಒಂದು ಬಾರಿ ಕೊರೊನಾ ವೈರಸ್ನ್ನ ಗೆದ್ದ ಜನರಿಗೆ ಎರಡನೇ ಬಾರಿಗೆ ಕೊರೊನಾ ವೈರಸ್ ಸೋಂಕು ಹರಡಬಲ್ಲದೇ..? ಒಂದು ವೇಳೆ ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದ್ರೆ ಇದರ ಅಪಾಯ ಯಾವ ಪ್ರಮಾಣದಲ್ಲಿ ಇರಲಿದೆ..? ಈಗಂತೂ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ಯಾರಿಗೆ ಹೆಚ್ಚು ಅಪಾಯ ಕಾದಿದೆ. ಎಂಬಿತ್ಯಾದಿ ಪ್ರಶ್ನೆಗಳು ಅನೇಕರಲ್ಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸಂಶೋಧನೆಯೊಂದು ಉತ್ತರ ನೀಡಿದ್ದು, ವೃದ್ಧರಿಗೆ ಕೊರೊನಾ 2ನೇ ಅಲೆಯಿಂದ ಅತಿ ಹೆಚ್ಚು ಅಪಾಯ ಕಾದಿದೆ ಎಂದು ಹೇಳಿದೆ.
ಕೊರೊನಾ ವೈರಸ್ನಿಂದ ಒಂದು ಬಾರಿ ಗೆದ್ದ ವೃದ್ಧರು ನಮಗಿನ್ನು ಅಪಾಯ ಇಲ್ಲ ಎಂದು ಕಡೆಗಣಿಸುವಂತಿಲ್ಲ. ಡೆನ್ಮಾರ್ಕ್ನಲ್ಲಿ ನಡೆಸಲಾದ ಸಂಶೋಧನೆಯೊಂದರ ಪ್ರಕಾರ ಒಂದು ಬಾರಿ ಕೊರೊನಾದಿಂದ ಗುಣಮುಖರಾದ 65 ವರ್ಷ ಒಳಗಿನ ರೋಗಿಗಳು ಕಡಿಮೆ ಅಂದರೂ 6 ತಿಂಗಳುಗಳ ಕಾಲ ಕೊರೊನಾ ಸೋಂಕಿನಿಂದ 80 ಪ್ರತಿಶತ ಸುರಕ್ಷಿತರಾಗಿ ಇರ್ತಾರೆ. ಆದರೆ 65 ವರ್ಷ ಮೇಲ್ಪಟ್ಟವರಿಗೆ ಈ ಪ್ರಮಾಣ ಕೇವಲ 47 ಪ್ರತಿಶತ ಇದೆ ಎನ್ನಲಾಗಿದೆ.
ಮೆಡಿಕಲ್ ಪತ್ರಿಕೆಯಾದ ಲಾಂಸೆಟ್ನಲ್ಲಿ ಪ್ರಕಟಿಸಲಾದ ಸಂಶೋಧನಾ ವರದಿಯಲ್ಲಿ, ವೃದ್ಧರು ಕೊರೊನಾ ಎರಡನೆ ಅಲೆಯಿಂದ ಬಚಾವಾಗಬೇಕು ಅಂದರೆ ಮಾರ್ಗಸೂಚಿಗಳನ್ನ ಪಾಲನೆ ಮಾಡದೇ ಬೇರೆ ದಾರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. 65 ವರ್ಷ ಮೇಲ್ಪಟ್ಟವರಲ್ಲಿ ಕೊರೊನಾ ಸಾವು ಕೂಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಸಂಶೋಧಕ ಸ್ಟೀನ್ ಎಥಿಲ್ಬರ್ಗ್, ಕೊರೊನಾ ವೈರಸ್ ದಾಳಿಗೆ ಎರಡನೆ ಬಾರಿಗೆ ತುತ್ತಾಗುವ ಸಾಧ್ಯತೆ ಯುವಕರು ಹಾಗೂ ವಯಸ್ಕರಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಆದರೆ ವೃದ್ಧರಿಗೆ ಮಾತ್ರ ಕೊರೊನಾ ಅಪಾಯ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ.