ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಮಂಕು ಬಡಿಯುವಂತೆ ಮಾಡಿರುವ ಕೊರೊನಾ ವೈರಸ್ ಇದೀಗ ಅಂಟಾರ್ಕ್ಟಿಕಾ ಪ್ರವೇಶಿಸಿದೆ ಎಂದು ಚಿಲಿ ದೇಶದ ಮಿಲಿಟರಿ ಮೂಲಗಳು ತಿಳಿಸಿವೆ.
ಮಂಜಿನ ಖಂಡದಲ್ಲಿ ತಾನು ಸ್ಥಾಪಿಸಿರುವ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ 36 ಮಂದಿಗೆ ಸೋಂಕು ತಗುಲಿದ್ದು, ಇವರಲ್ಲಿ 26 ಮಂದಿ ಮಿಲಿಟರಿ ಸಿಬ್ಬಂದಿ ಹಾಗೂ ಇನ್ನುಳಿದ 10 ಮಂದಿ ನಾಗರಿಕರಾಗಿದ್ದಾರೆ.
ಬೇಸ್‌ನಲ್ಲಿ ಇರುವ ಎಲ್ಲ ವ್ಯಕ್ತಿಗಳನ್ನು ಸಹ ಕ್ವಾರಂಟೈನ್ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಚಿಲಿಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 27ರಿಂದ ಡಿಸೆಂಬರ್ 10ರ ನಡುವಿನ ಅವಧಿಯಲ್ಲಿ ಅಂಟಾರ್ಕ್ಟಿಕಾಗೆ ಭೇಟಿ ಕೊಟ್ಟಿದ್ದ ತನ್ನ ನೌಕೆಯೊಂದರ 208 ಮಂದಿ ಸಿಬ್ಬಂದಿ ಪೈಕಿ ಮೂವರಿಗೆ ಕೋವಿಡ್-19 ಸೋಂಕು ತಗುಲಿರುವುದಾಗಿ ನೌಕಾಪಡೆ ತಿಳಿಸಿತ್ತು.
ಅಂಟಾರ್ಕ್ಟಿಕಾದಲ್ಲಿರುವ ಸಂಶೋಧನಾ ಹಾಗೂ ಮಿಲಿಟರಿ ಕೇಂದ್ರಗಳು ದಕ್ಷಿಣ ಧ್ರುವದಲ್ಲಿರುವ ಈ ಖಂಡವನ್ನು ಕೋವಿಡ್-19 ಮುಕ್ತವಾಗಿ ಇಡಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಪ್ರವಾಸೋದ್ಯಮ ರದ್ದು ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನೂ ಸಹ ನಿಯಂತ್ರಣದಲ್ಲಿ ಇಡಲಾಗಿತ್ತು. ಖಂಡದಲ್ಲಿರುವ 38 ಸಂಶೋಧನಾ ಕೇಂದ್ರಗಳಲ್ಲಿ 1000ದಷ್ಟು ಮಂದಿ ಕೆಲಸ ಮಾಡುತ್ತಿದ್ದು, ಯಾವುದೇ ಅಹಿತಕರ ಘಟನೆ ಇಲ್ಲದೇ ಚಳಿಗಾಲದ ದಿನಗಳನ್ನು ಕಳೆದಿದ್ದರು.