
ಲಂಡನ್: ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಪ್ರಯೋಗದ ವಿವಿಧ ಹಂತಗಳಲ್ಲಿರುವ ಯಶಸ್ವಿ ಲಸಿಕೆ ಶೀಘ್ರವೇ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.
ಆದರೆ, ಲಸಿಕೆಗಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಇನ್ನು ನಾಲ್ಕೇ ದಿನದಲ್ಲಿ ಕೊರೊನಾ ಲಸಿಕೆ ಆಸ್ಪತ್ರೆಗೆ ನೀಡಲಾಗುವುದು. ಕೊರೊನಾ ವೈರಸ್ ವಿರುದ್ಧ ಗೇಮ್ ಚೇಂಜರ್ ಎಂದೇ ಪರಿಗಣಿಸಲ್ಪಟ್ಟಿರುವ ಲಸಿಕೆಯನ್ನು ಲಂಡನ್ ನಲ್ಲಿ ನವೆಂಬರ್ ನಿಂದ ಬಳಕೆಗೆ ಬಿಡುಗಡೆ ಮಾಡಲಾಗುವುದು.
ಲಂಡನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಔಷಧ ತಯಾರಿಕಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನವೆಂಬರ್ 2 ರಂದು ಆಸ್ಪತ್ರೆಯ ಸಿಬ್ಬಂದಿಗೆ ನೀಡಲಾಗುತ್ತದೆ. ಇನ್ನು ನಾಲ್ಕೇ ದಿನದಲ್ಲಿ ಲಸಿಕೆಯನ್ನು ಲಂಡನ್ ನ ಪ್ರಮುಖ ಆಸ್ಪತ್ರೆಯೊಂದರ ಸಿಬ್ಬಂದಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನವಂಬರ್ 2 ರಿಂದ ಲಸಿಕೆ ಪಡೆಯಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಸೂಚನೆ ನೀಡಿದೆ ಎಂದು ‘ದಿ ಸನ್’ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿ ಮೂರನೇ ಹಂತದ ಪ್ರಯೋಗದ ಬಳಿಕ ಲಸಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.