ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಮನೆಗೆ ಹೋಗುವ ಆತುರದಲ್ಲಿ ಕೊರೊನಾ ಪಾಸಿಟಿವ್ ಬಂದರೂ ವ್ಯಕ್ತಿ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದಾನೆ. ಬುರ್ಕಾ ಧರಿಸಿ ವಿಮಾನವೇರಿದ್ದಾನೆ. ಆದ್ರೆ ಕೊನೆಯಲ್ಲಿ ಆತನ ಬಣ್ಣ ಬಯಲಾಗಿದೆ.
ಇಂಡೋನೇಷ್ಯಾದ ಜಕಾರ್ತಾದಲ್ಲಿ ಘಟನೆ ನಡೆದಿದೆ. ಜಕಾರ್ತಾದಿಂದ ವ್ಯಕ್ತಿ ಟೆರ್ನೆಟ್ ಗೆ ಪ್ರಯಾಣ ಬೆಳೆಸಬೇಕಿತ್ತು. ಆತನ ಪತ್ನಿ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಪತ್ನಿ ಕೊರೊನಾ ವರದಿ ಹಿಡಿದು ವಿಮಾನ ಹತ್ತಿದ್ದಾನೆ. ಜಕಾರ್ತಾ ವಿಮಾನ ನಿಲ್ದಾಣದ ಕಣ್ಣು ತಪ್ಪಿಸುವಲ್ಲಿ ವ್ಯಕ್ತಿ ಸಫಲನಾಗಿದ್ದಾನೆ. ಆದ್ರೆ ವಿಮಾನದಲ್ಲಿ ತಪ್ಪು ಮಾಡಿದ್ದಾನೆ.
ವಿಮಾನದ ಶೌಚಾಲಯಕ್ಕೆ ಹೋದ ವ್ಯಕ್ತಿ ಬಟ್ಟೆ ಬದಲಿಸಿದ್ದಾನೆ. ಇದನ್ನು ವಿಮಾನ ಸಿಬ್ಬಂದಿ ನೋಡಿ, ಪೈಲಟ್ ಗೆ ಮಾಹಿತಿ ನೀಡಿದ್ದಾರೆ. ಪೈಲಟ್, ಟೆರ್ನೆಟ್ ವಿಮಾನ ನಿಲ್ದಾಣಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ವಿಮಾನ, ಟೆರ್ನೆಟ್ ನಲ್ಲಿ ಲ್ಯಾಂಡ್ ಆಗ್ತಿದ್ದಂತೆ ಭದ್ರತಾ ಸಿಬ್ಬಂದಿ, ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಗೆ ಕೊರೊನಾ ಇರುವುದು ಪತ್ತೆಯಾಗಿದೆ.