ನ್ಯೂಯಾರ್ಕ್: 46 ವರ್ಷದ ಜಾರ್ಜ್ ಫ್ಲಾಯ್ಡ್ ಸಾವು ಅಮೇರಿಕಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿದೆ.
“ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ದಿನಕ್ಕೊಂದು ಮನ ಕಲಕುವ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಲಾಯ್ಡ್ ಅವರ 6 ವರ್ಷದ ಪುತ್ರಿ ಜಿನ್ನಾ ” ಅಪ್ಪ ಜಗತ್ತನ್ನು ಬದಲಾಯಿಸುತ್ತಾರೆ” ಎಂದು ಘೋಷಣೆ ಕೂಗಿದ್ದು ಸಾಕಷ್ಟು ವೈರಲ್ ಆಗಿತ್ತು. ಈಗ ಇನ್ನೊಬ್ಬ ಬಾಲಕಿಯ ವಿಡಿಯೋ ವೈರಲ್ ಆಗಿದೆ.
ಹೂಸ್ಟನ್ ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಅಳುತ್ತಿದ್ದ ಐದು ವರ್ಷದ ಬಾಲಕಿಯ ಬಳಿ ಪೊಲೀಸ್ ಅಧಿಕಾರಿಯೊಬ್ಬ ಬಂದು ವಿಚಾರಿಸುತ್ತಾನೆ. ಆಕೆ “ನೀವು ನಮ್ಮನ್ನು ಗುಂಡು ಹೊಡೆದು ಸಾಯಿಸುತ್ತೀರಾ..?” ಎಂದು ಮುಗ್ದ ಭಾಷೆಯಲ್ಲಿ ಕೇಳುತ್ತಾಳೆ.
ಪೊಲೀಸ್ ಅಧಿಕಾರಿ, ಬಾಲಕಿಯ ಎದುರು ಕುಳಿತು “ನಾವಿಲ್ಲಿರುವುದು ನಿಮ್ಮ ರಕ್ಷಣೆಗೆ. ನಾವು ನಿಮಗೆ ಯಾವುದೇ ಕಾರಣಕ್ಕೂ ಹಿಂಸಿಸುವುದಿಲ್ಲ. ನೀನು ಪ್ರತಿಭಟನೆ ಮಾಡು, ನೀನು ಗುಂಪು ಕಟ್ಟು, ಏನಾದರೂ ಮಾಡು. ಯಾವುದೇ ವಸ್ತುವನ್ನು ಒಡೆಯಬೇಡ ಅಷ್ಟೆ” ಎಂದು ಉತ್ತರಿಸುತ್ತಾರೆ.
ಬಾಲಕಿ ಹಾಗೂ ಪೊಲೀಸರ ನಡುವೆ ನಡೆದ ಈ ಸಂವಾದವನ್ನು ಆಕೆಯ ತಂದೆ ಸಿಮೋನ್ ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.