ಇಡೀ ವಿಶ್ವವನ್ನು ಬೆಚ್ಚಿಬೀಳಿಸಿರುವ ಕೊರೋನಾದಿಂದ ಪ್ರತಿಯೊಬ್ಬರು ನಲುಗಿ ಹೋಗಿದ್ದಾರೆ. 2020 ಯಾವ ರೀತಿ ಇತ್ತು ಎಂದು ಯಾರನ್ನೇ ಕೇಳಿದರೂ, ಪ್ರತಿಯೊಬ್ಬರು ಅತ್ಯಂತ ಕೆಟ್ಟ ವರ್ಷ ಎನ್ನುವ ಮಾತನ್ನೇ ಹೇಳುತ್ತಾರೆ. ಆದರೆ ಈ ವರ್ಷವೇ ಪ್ರಪಂಚ ಪ್ರಳಯವಾಗುವುದೇ ಎನ್ನುವ ಮಾತುಗಳು ಇದೀಗ ಕೇಳಿಬರುತ್ತಿವೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ಕೊರೋನಾದಿಂದ ಪ್ರಪಂಚ ಅಂತ್ಯವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಕೆಲವರು ತಮ್ಮದೇ ಆದ ರೀತಿಯಲ್ಲಿ ಸಾಕ್ಷಿಯನ್ನು ಒದಗಿಸಿದ್ದಾರೆ. ಈ ಹಿಂದೆ 2012ರಲ್ಲಿ ಪ್ರಪಂಚ ಪ್ರಳಯವಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದಕ್ಕಾಗಿ ಹಾಲಿವುಡ್ನಲ್ಲಿ ಭಾರಿ ಬಜೆಟ್ ಚಿತ್ರವೂ ತೆರೆಕಂಡಿತ್ತು. ಈ ರೀತಿ ಪ್ರಪಂಚ ಪ್ರಳಯವಾಗುತ್ತದೆ ಎನ್ನುವುದಕ್ಕೆ, ಮಾಯನ್ ಕ್ಯಾಲೆಂಡರ್ನಲ್ಲಿ ಉಲ್ಲೇಖವಾಗಿರುವ ಅಂಶ.
ಆದರೆ ಹಿರಿಯ ಸಂಶೋಧಕ ಪೋಲೋ ಟಗಾಲೋಗಿಯನ್ ಪ್ರಕಾರ, ಮಾಯನ್ ಕ್ಯಾಲೆಂಡರ್ ಪ್ರಕಾರ ನೋಡುವುದಾದರೆ ನಾವಿನ್ನೂ 2012ರಲ್ಲೇ ಇದ್ದೇವೆ. ಇದಕ್ಕೆ ಕಾರಣವೆಂದರೆ, ಮಾಯನ್ ಕ್ಯಾಲೆಂಡರ್ನಿಂದ ಜ್ಯೂಲಿಯನ್ ಕ್ಯಾಲೆಂಡರ್ಗೆ ಶಿಫ್ಟ್ ಆಗುವಾಗ 11 ದಿನ ಹೆಚ್ಚು ಕಡಿಮೆಯಾಗಿದೆ ಅಂತೆ. ಇಲ್ಲಿಯವರೆಗೆ ಹೀಗೆ 2948 ದಿನಗಳ ವ್ಯತ್ಯಾಸವಾಗಿದೆ ಎಂದು ಹೇಳಿದ್ದು, ಇದನ್ನು ಲೆಕ್ಕಹಾಕಿದರೆ ಸರಿಯಾಗಿ ಎಂಟು ವರ್ಷ ನಾವು ಮುಂದಿದ್ದೇವೆ. ಆದ್ದರಿಂದ ಮಾಯನ್ ಕ್ಯಾಲೆಂಡರ್ ಪ್ರಕಾರ ಇದು ವಿನಾಶದ ಅವಧಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಬಳಿಕ ಟ್ವೀಟ್ ಡಿಲಿಟ್ ಮಾಡಿದ್ದಾರೆ. ಆದರೆ ಅವರ ಹಿಂಬಾಲಕರು ಅವರ ಟ್ವೀಟ್ನ್ನು ಸ್ಕ್ರೀನ್ಶಾಟ್ ತಗೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಕೊರೋನಾದಿಂದ ಜೀವ ಉಳಿಸಿಕೊಳ್ಳುವ ಆತಂಕದಲ್ಲಿರುವ ಜನರ ಮಧ್ಯೆ, ಇದೀಗ ಈ ಸುದ್ದಿ ಹರಿದಾಡುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.