ಮಹತ್ವದ ಕಾರ್ಯಾಚರಣೆ ನಡೆಸಿದ ಪೆರುಗ್ವೆ ಪೊಲೀಸರು ಬರೋಬ್ಬರಿ 3685 ಕೋಟಿ ರೂಪಾಯಿಯಷ್ಟು ಬೆಲೆ ಬಾಳುವ ಕೊಕೇನ್ ಜಪ್ತಿ ಮಾಡಿದ್ದಾರೆ. ರಾಜಧಾನಿ ಅಸುನ್ಸಿಯೋನ್ ಸಮೀಪದ ವಿಲ್ಲೆಟ್ಟಾ ನಗರದ ಖಾಸಗಿ ಬಂದರಿನಲ್ಲಿದ್ದ ಕಲ್ಲಿದ್ದಲು ಸಾಗಿಸುವ ಕಂಟೇನರ್ ಗಳಲ್ಲಿ ಕೊಕೇನ್ ಪತ್ತೆಯಾಗಿದೆ.
ಸಮುದ್ರದ ಮೂಲಕ ಚಾರ್ಕೋಲ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ 3 ಟನ್ ನಷ್ಟು ಕೊಕೇನ್ ವಶಕ್ಕೆ ಪಡೆಯಲಾಗಿದೆ. ಸಣ್ಣ ಪೊಟ್ಟಣಗಳಲ್ಲಿ ಕಟ್ಟಿಟ್ಟು ಚಾರ್ಕೋಲ್ ನಡುವೆ ಅಡಗಿಸಿ ಹಡಗಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು.
ದಾಳಿ ಮಾಡಿದ ಪೊಲೀಸರು ಸ್ಥಳೀಯ ಚಾನಲ್ ಮಾಜಿ ನಿರ್ದೇಶಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಹಡಗಿನಲ್ಲಿಯೂ ಕೊಕೇನ್ ಅವಿತಿಟ್ಟಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪತ್ತೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಒಳಾಡಳಿತ ಸಚಿವ ಎಕ್ಲಿಡ್ಸ್ ಆಕೆವೆಡೋ ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಇದ್ದ ಈ ಕಂಟೇನರ್ ಗಳನ್ನು ಇಸ್ರೇಲ್, ಬೆಲ್ಜಿಯಂ ಸಿಟಿ, ಬ್ಯೂನಸ್ ಐರಿಸ್, ಅರ್ಜೆಂಟೈನಾ ಕ್ಯಾಪಿಟಲ್ ಗೆ ಸಾಗಾಣೆ ಮಾಡಲಾಗುತ್ತಿತ್ತು ಇದು ದಕ್ಷಿಣ ಅಮೆರಿಕಾ ದೇಶದಲ್ಲಿ ಪೊಲೀಸರು ವಶಪಡಿಸಿಕೊಂಡ ಅತಿ ದೊಡ್ಡ ಮಾದಕ ವಸ್ತು ಜಪ್ತಿ ಕಾರ್ಯಾಚರಣೆಯಾಗಿದೆ. 3 ಟನ್ ಗಿಂತ ಹೆಚ್ಚಿನ ಪ್ರಮಾಣದ ಕೊಕೇನ್ ಜಪ್ತಿ ಮಾಡಲಾಗಿದೆ. ಲ್ಯಾಟಿನ್ ಅಮೆರಿಕದಿಂದ ಚಾರ್ಕೋಲ್ ಪ್ರಮುಖವಾಗಿ ರಫ್ತಾಗಲಿದ್ದು, ಇದರೊಂದಿಗೆ ಕೊಕೇನ್ ಕೂಡ ಸಾಗಿಸಲಾಗುತ್ತಿದೆ ಎಂದು ಹೇಳಲಾಗಿದೆ.