ಬ್ರೆಜಿಲ್‌ನ ವೆಟರ್ನರಿ ವಿದ್ಯಾರ್ಥಿಯೊಬ್ಬನಿಗೆ ಕಚ್ಚಿ ಆಸ್ಪತ್ರೆ ಸೇರುವಂತೆ ಮಾಡಿರುವ ನಾಗರ ಹಾವೊಂದು, ಪ್ರಾಣಿಗಳ ಕಳ್ಳಸಾಗಾಟ ಸಂಬಂಧ ದೊಡ್ಡ ಮಟ್ಟದ ತನಿಖೆ ನಡೆಯುವಂತೆ ಮಾಡಿ ಸೆಲೆಬ್ರಿಟಿ ಆಗಿಬಿಟ್ಟಿದೆ.
ಏಷ್ಯಾ ಮೂಲದ ಮೊನೋಕ್ಲೆಡ್ ಕೋಬ್ರಾ ಒಂದು ಬ್ರೆಜಿಲ್‌ನ ಪೆಡ್ರೋ ಕ್ರಾಂಬೆಕ್ ಲೆಹ್‌ಮುಕುಲ್ ಎಂಬಾತನಿಗೆ ಕಚ್ಚಿದೆ. ಜುಲೈ 7ರಂದು ರಾಜಧಾನಿ ಬ್ರೆಸಿಲಿಯಾದಲ್ಲಿ ಈ ಘಟನೆ ಜರುಗಿದ್ದು, ಆತನಿಗೆ ಚಿಕಿತ್ಸೆ ನೀಡಲೆಂದು ಸೂಕ್ತವಾದ ಪ್ರತಿವಿಷಕ್ಕೆ ವೈದ್ಯರು ಎಡತಾಕಿಬಿಟ್ಟಿದ್ದಾರೆ. ಪ್ರತಿವಿಷವನ್ನು ದೂರದ ಸಾವೋ ಪೌಲೋದಿಂದ ತರಿಸಿಕೊಳ್ಳಬೇಕಾಗಿ ಬಂದಿದೆ.
ವಿದ್ಯಾರ್ಥಿಯ ಅಪಾರ್ಟ್‌ಮೆಂಟ್‌ಗೆ ಈ ಹಾವು ಹೇಗೆ ಬಂದಿತು ಎಂದು ಶೋಧ ನಡೆಸಲು ಮುಂದಾದ ಪೊಲೀಸರಿಗೆ ಇನ್ನೂ 23 ವಿವಿಧ ಹಾವುಗಳು, ಮೂರು ಶಾರ್ಕ್‌ಗಳು, ಈಲ್, ಟುಪಿನಾಂಬಿಸ್ ಹಲ್ಲಿಗಳು ಸೇರಿದಂತೆ ಅನೇಕ ಜೀವಿಗಳು ಸಿಕ್ಕಿವೆ. ಆರು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಕಳೆದು ಡಿಸ್ಚಾರ್ಜ್ ಆದ ಈತನಿಗೆ 61,000 ರಿಯಾಲ್‌ನಷ್ಟು ದಂಡ ವಿಧಿಸಿದ್ದು, ಆತನ ಪೋಷಕರನ್ನೂ ಸಹ ತನಿಖೆಗೆ ಒಳಪಡಿಸಿ ದಂಡ ಪೀಕಿಸಲಾಗಿದೆ.
ಇದೇ ವೇಳೆ, ನಜ ಹೆಸರಿನ ಈ ಕೋಬ್ರಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದೆ. ತನಿಖೆ ಮಾಡುತ್ತಿದ್ದವರಿಗೆ ಯಾವುದೇ ಸುಳಿವು ಸಿಗದೇ ಇರಲಿ ಎಂದು ಈ ಹಾವನ್ನು ಆಚೆ ಬಿಟ್ಟುಬಿಡಲಾಗಿತ್ತು. ಅದರೆ ಅದೀಗ ಶಾಪಿಂಗ್ ಸೆಂಟರ್ ಒಂದರಲ್ಲಿ ಸಿಕ್ಕಿದ್ದು, ಸೆಲೆಬ್ರಿಟಿ ಆಗಿಬಿಟ್ಟಿದೆ. ಈ ಹಾವಿನ ಹೆಸರಿನಲ್ಲಿ @najaoriginal ಎಂದು ಟ್ವಿಟರ್ ಖಾತೆ ಆರಂಭಿಸಿದ್ದು, 50 ಸಾವಿರ ಅನುಯಾಯಿಗಳಿದ್ದಾರೆ.