ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೊಮ್ಮೆ ಕಣಕ್ಕಿಳಿಯುತ್ತಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚುನಾವಣಾ ಸಮೀಕ್ಷೆಯೊಂದು ಶಾಕ್ ನೀಡಿದೆ. ಟ್ರಂಪ್ ಗಿಂತ ಅವರ ಎದುರಾಳಿ ಜೋ ಬಿಡೆನ್ ಮುನ್ನಡೆ ಸಾಧಿಸಿದ್ದಾರೆಂದು ಈ ಸಮೀಕ್ಷೆ ತಿಳಿಸಿದೆ.
ಪಬ್ಲಿಕ್ ಪಾಲಿಸಿ ಪೋಲಿಂಗ್ ಈ ಸಮೀಕ್ಷೆ ನಡೆಸಿದ್ದು, ಇದರ ಪ್ರಕಾರ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 4 ಅಂಕಗಳಿಂದ ಮುಂದಿದ್ದಾರೆ ಎಂದು ಹೇಳಲಾಗಿದೆ. ಡೊನಾಲ್ಡ್ ಟ್ರಂಪ್ ಪರ ಶೇಕಡಾ 45 ಮತಗಳು ಲಭ್ಯವಾಗಿದ್ದರೆ, ಬಿಡೆನ್ ಅವರಿಗೆ ಶೇಕಡಾ 49 ಮತಗಳು ಲಭಿಸಿವೆ.
ಡೊನಾಲ್ಡ್ ಟ್ರಂಪ್ ಅವರಿಗೆ ಮಹಿಳೆಯರಿಗಿಂತ ಪುರುಷರ ಬೆಂಬಲವೇ ಹೆಚ್ಚಾಗಿ ಸಿಕ್ಕಿದೆ ಎನ್ನಲಾಗಿದ್ದು, ಉತ್ತರ ಕೊರೊಲಿನಾದ ಶೇಕಡಾ 50 ಮತದಾರರು ಟ್ರಂಪ್ ಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಹೊಡೆತದಿಂದ ಆಡಳಿತರೂಢ ಡೊನಾಲ್ಡ್ ಟ್ರಂಪ್ ಸರ್ಕಾರ ತತ್ತರಿಸಿದ್ದು, ಇದರ ಜೊತೆಗೆ ಹಿಂಸಾಚಾರಕ್ಕೆ ತಿರುಗಿರುವ ಜನಾಂಗೀಯ ಸಂಘರ್ಷವೂ ತಲೆನೋವಿಗೆ ಕಾರಣವಾಗಿದೆ. ಇದೀಗ ಬಹಿರಂಗವಾಗಿರುವ ಸಮೀಕ್ಷೆ ಮತ್ತೊಂದು ಶಾಕ್ ನೀಡಿದೆ.