
ಮಾಸ್ಕೋ: ರಷ್ಯಾದ ಕೊರೊನಾ ಲಸಿಕೆ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ. ಸ್ಪುಟ್ನಿಕ್ –V ಲಸಿಕೆಯ ಬಗ್ಗೆ ರಷ್ಯಾ ಭಾರತಕ್ಕೆ ಮಾಹಿತಿ ನೀಡಿದೆ. ಎರಡು ಹಂತದ ಪ್ರಯೋಗಗಳಲ್ಲಿ ಯಶಸ್ಸು ಕಂಡಿರುವ ರಷ್ಯಾ ಲಸಿಕೆ ಕುರಿತಾದ ಮಾಹಿತಿಗಳನ್ನು ಭಾರತಕ್ಕೆ ನೀಡಿದೆ. ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ರಷ್ಯಾ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಲಸಿಕೆ ಸ್ಪುಟ್ನಿಕ್ –V ಸಮಗ್ರ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ. ಲಸಿಕೆಗಳ ಉತ್ಪಾದನೆ ಪ್ರಯೋಗ ಕುರಿತಾದ ಹೆಚ್ಚಿನ ಮಾಹಿತಿಯನ್ನು ರಷ್ಯಾ ಭಾರತಕ್ಕೆ ನೀಡಲಿದೆ.
ಇನ್ನು ಭಾರತ ಸೇರಿ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಲಸಿಕೆಯ ಪ್ರಯೋಗದ ಹಂತಗಳ ವರದಿಯನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ರಷ್ಯಾ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ ಮುಖ್ಯಸ್ಥ ಕಿರೀಲ್ ಡೆಮೆಟ್ರಿವ್ ಅವರು ಅಕ್ಟೋಬರ್ ನಲ್ಲಿ ಪ್ರಯೋಗದ ವರದಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.