ಇಸ್ಲಾಮಾಬಾದ್: ಇಲ್ಲಿನ ಮಾರ್ಗಹಜಾರ್ ಪ್ರಾಣಿ ಸಂಗ್ರಹಾಲಯದಿಂದ 513 ಪ್ರಾಣಿಗಳು ನಾಪತ್ತೆಯಾಗಿವೆ. ಪ್ರಾಣಿ ಸಂಗ್ರಹಾಲಯದಲ್ಲಿ ಕನಿಷ್ಠ 917 ಪ್ರಭೇದದ ಪ್ರಾಣಿ, ಪಕ್ಷಿಗಳು ಇರುವ ಬಗ್ಗೆ ಮೃಗಾಲಯ ಆಡಳಿತ ನೋಡಿಕೊಳ್ಳುವ ಇಸ್ಲಾಮಾಬಾದ್ ಮೆಟ್ರೊಪಾಲಿಟನ್ ಕಾರ್ಪೊರೇಶನ್(ಐಎಂಸಿ) 2019 ರಲ್ಲಿ ನೀಡಿದ ನೋಟಿಸ್ ಒಂದರಲ್ಲಿ ತಿಳಿಸಲಾಗಿತ್ತು.
ಮೇ ತಿಂಗಳಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಸೂಚನೆಯಂತೆ ಪ್ರಾಣಿ ಸಂಗ್ರಹಾಲಯವನ್ನು ಇಸ್ಲಾಮಾಬಾದ್ ವನ್ಯಜೀವಿ ನಿರ್ವಹಣಾ ಪ್ರಾಧಿಕಾರ(ಐಡಬ್ಲ್ಯುಎಂಬಿ)ಕ್ಕೆ ಹಸ್ತಾಂತರಿಸಲಾಗಿದೆ. ಪ್ರಾಣಿಗಳನ್ನು ಝೂನಿಂದ ಅವುಗಳ ಪ್ರತ್ಯೇಕ ಆವಾಸ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ.
ಸ್ಥಳಾಂತರ ಸಂದರ್ಭದ ಪತ್ರಕ್ಕೆ ಜುಲೈ 16 ರಂದು ಡೆಪ್ಯೂಟಿ ಡೈರೆಕ್ಟರ್ ಬಿಲಾಲ್ ಖಾಜಿ, ಪರಿಸರ ಬದಲಾವಣೆ ಹಾಗೂ ಜೀವ ವೈವಿಧ್ಯ ಮಂತ್ರಾಲಯದ ನಿರ್ದೇಶಕ ನೀಮ್ ಅಶ್ರಫ್ ರಾಜಾ ಸಹಿ ಹಾಕಿದ್ದಾರೆ. ಐಡಬ್ಲ್ಯುಎಂಬಿ ಚೇರ್ಮನ್ ಅನೀಶ್ ರೆಹಮಾನ್ ಪ್ರಾಣಿಗಳ ಹಸ್ತಾಂತರ ಮಾಡಿಕೊಂಡಿದ್ದು, ಅಚ್ಚರಿ ಎಂದರೆ ದಾಖಲೆಯಲ್ಲಿ 917 ರ ಬದಲು ಕೇವಲ 404 ಪ್ರಾಣಿಗಳಿವೆ ಎಂದು ಅಲ್ಲಿನ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಬಾರ್ಕಿಂಗ್ ಜಿಂಕೆ, ಹೊಗ್ ಜಿಂಕೆಯ ಸಂತತಿಗಳು ಹೆಚ್ಚಿವೆ. ಆದರೆ ಚುಕ್ಕೆ ಜಿಂಕೆಗಳ ಸಂಖ್ಯೆ 12 ರಿಂದ 11 ಕ್ಕೆ ಇಳಿದಿದೆ. ಚಿಂಕಾರಾ ಗಝೆಲ್ ಜಿಂಕೆಗಳ ಸಂಖ್ಯೆ 7 ರಿಂದ 3 ಕ್ಕೆ ಇಳಿದಿದೆ. ಕೃಷ್ಣ ಮೃಗಳ ಸಂಖ್ಯೆ 4 ರಿಂದ 3 ಕ್ಕೆ ಇಳಿದಿದೆ. ನೀಲಿ ಜಿಂಕೆ 18 ರಿಂದ 16 ಕ್ಕೆ, ಜಿಬ್ರಾಗಳ ಸಂಖ್ಯೆ 5 ರಿಂದ 4ಕ್ಕೆ ಇಳಿದಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.