ಕೋವಿಡ್-19 ಕುರಿತು ಮೊಟ್ಟ ಮೊದಲಿಗೆ ಸಂಶೋಧನೆ ನಡೆಸಿದ ಚೀನಾದ ವೈರಾಣು ತಜ್ಞೆ ಅಲ್ಲಿಂದ ತಪ್ಪಿಸಿಕೊಂಡು ಅಮೆರಿಕಾ ಸೇರಿಕೊಂಡಿದ್ದಾರೆ.
ತಮಗೆ ಜೀವಭಯ ಎಂದು ಹೇಳಿಕೊಂಡಿರುವ ಆಕೆ, ಕೊರೋನಾ ವೈರಾಣು ಹಾಗೂ ಚೀನಾ ಸರ್ಕಾರದ ಧೋರಣೆಗಳ ಕುರಿತಂತೆ ಭಯಾನಕ ಸತ್ಯಾಂಶಗಳನ್ನ ಹೊರ ಹಾಕಿದ್ದಾರೆ.
ಅಮೆರಿಕಾದ ಅಜ್ಞಾತ ಸ್ಥಳದಿಂದ ಫಾಕ್ಸ್ ನ್ಯೂಸ್ ವಾಹಿನಿಗೆ ಸಂದರ್ಶನ ನೀಡಿರುವ ಲೀ ಮೆಂಗ್ ಯಾನ್, ಹಾಂಕಾಂಗ್ ಸಾರ್ವಜನಿಕ ಆರೋಗ್ಯ ವಿವಿಯಲ್ಲಿ ವೈರಾಣು ಶಾಸ್ತ್ರಜ್ಞೆ ಆಗಿ ಕೆಲಸ ಮಾಡಿದ್ದು, ಕೊರೋನಾ ಬಗ್ಗೆ ಸಂಶೋಧನೆ ನಡೆಸಿದ ಮೊದಲ ವಿಜ್ಞಾನಿಗಳ ತಂಡದಲ್ಲಿದ್ದರು.
ಜಗತ್ತಿನಾದ್ಯಂತ 12 ದಶಲಕ್ಷ ಜನರಿಗೆ ಸೋಂಕು ಹರಡಿದೆ. ಅಂದಾಜು 5.60 ಲಕ್ಷ ಮಂದಿ ಅಸುನೀಗಿದ್ದಾರೆ. ಇಷ್ಟೆಲ್ಲ ಆಗುವ ಮೊದಲೇ ಚೀನಾ ಸರ್ಕಾರಕ್ಕೆ ಈ ಬಗ್ಗೆ ವಿಜ್ಞಾನಿಗಳಾದ ನಾವು ಎಚ್ಚರಿಕೆ ಕೊಟ್ಟಿದ್ದೆವು. ಆದರೂ ಎಚ್ಚರ ವಹಿಸಲಿಲ್ಲ. ವೈದ್ಯರು ಮತ್ತು ವಿಜ್ಞಾನಿಗಳು ಈ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವಂತಿಲ್ಲ. ಸಾಲದ್ದಕ್ಕೆ ಮಾಸ್ಕ್ ಹಾಕಿಸಿ, ಬಾಯಿ ಮುಚ್ಚಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇಡೀ ಜಗತ್ತಿನೆದುರು ಚೀನಾ ಸತ್ಯ ಒಪ್ಪಿಕೊಳ್ಳಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇದೆ. ಚೀನಾ ಹೊರಗಿನ ಸಂಶೋಧಕರನ್ನು ಬಿಟ್ಟುಕೊಳ್ಳುತ್ತಿಲ್ಲ. ಹಾಂಕಾಂಗ್ ನ ನಮ್ಮನ್ನೇ ಒಳಗೆ ಬಿಟ್ಟುಕೊಳ್ಳುತ್ತಿಲ್ಲ.
ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುತ್ತಿದ್ದ ಪ್ರಮಾಣದ ಬಗ್ಗೆ ಹೇಳಿದರೂ ಕೇಳದ ಸರ್ಕಾರದಿಂದ ತನಗೆ ಪ್ರಾಣಭಯ ಇದೆ. ಹೀಗಾಗಿ ವಿವಿಯ ಕ್ಯಾಂಪಸ್, ಅಲ್ಲಿನ ಕ್ಯಾಮರಾ, ಜನರ ಕಣ್ತಪ್ಪಿಸಿ ಓಡಾಡುವ ಸ್ಥಿತಿ ಇತ್ತು. ಹೀಗಾಗಿ ರಾತ್ರೋರಾತ್ರಿ ಚೀನಾದಿಂದ ಹೊರಟು ಅಮೆರಿಕಾ ಸೇರಿದ್ದೇನೆ ಎಂದು ಹೇಳಿಕೊಂಡಿದ್ದಾರೆ.