ಬೀಜಿಂಗ್: ಅರ್ಧಂಬರ್ಧ ಸುಟ್ಟ ಮೀನು ತಿಂದ ಚೀನೀ ವ್ಯಕ್ತಿಯೊಬ್ಬ ತನ್ನ ಅರ್ಧ ಯಕೃತ್ತು (ಲಿವರ್)ನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.
ಹೊಟ್ಟೆನೋವು, ಸುಸ್ತು ಹಾಗೂ ಭೇದಿಯಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಹಂಗ್ ಜೊವು ಫಸ್ಟ್ ಪೀಪಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ತಿಂಗಳಿಂದ ಸಮಸ್ಯೆ ಇರುವುದಾಗಿ ತಿಳಿಸಿದ್ದರು.
ಸ್ಕ್ಯಾನಿಂಗ್ ಮಾಡಿ ನೋಡಿದ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ರೋಗಿಯ ಲಿವರ್ ನಲ್ಲಿ ಸುಮಾರು ಅರ್ಧ ಭಾಗ ಒಂದು ಗಡ್ಡೆ ಬೆಳೆದು ಅದು ರಸಿಗೆಯಿಂದ ತುಂಬಿಕೊಂಡಿತ್ತು. ನಂತರ ಆಪರೇಶನ್ ಮಾಡಿದ ವೈದ್ಯರು ರೋಗಿಯ ಲಿವರ್ ನ ಅರ್ಧ ಭಾಗ ತುಂಡರಿಸಿ ಜೋಡಿಸಿದ್ದಾರೆ.
ಪರಾವಲಂಬಿ ಚಪ್ಪಟೆ ಜೀವಿ ಲಿವರ್ ನಲ್ಲಿ ಬೆಳೆದಿದ್ದರಿಂದ ಈ ಪರಿಸ್ಥಿತಿ ಆಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿ ಅರೆ ಬೇಯಿಸಿದ ಮೀನು ತಿನ್ನುತ್ತಿದ್ದರು. ಅವುಗಳ ಹೊಟ್ಟೆಯಲ್ಲಿದ್ದ ಪರಾವಲಂಬಿ ಜೀವಿಗಳು ರೋಗಿಯ ಹೊಟ್ಟೆಯಲ್ಲಿ ಬೆಳೆದಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ವುಹಾನ್ ಕಾಡು ಪ್ರಾಣಿಗಳ ಮಾಂಸದ ಮಾರುಕಟ್ಟೆಯಿಂದ ಕೊರೋನಾ ಹರಡಿದೆ ಎಂದು ಹೇಳಲಾಗುತ್ತಿದೆ. ಅದರ ನಂತರವೂ ಚೀನಾದಲ್ಲಿ ಅರೆ ಬೇಯಿಸಿದ ಮಾಂಸ, ಮೀನು ತಿನ್ನುವವರ ಸಂಖ್ಯೆ ಕಡಿಮೆ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿ.