ಬೀಜಿಂಗ್: ಡಿಲೆವರಿ ಬಾಯ್ ಒಬ್ಬ ಸುಮಾರು 20 ಲಕ್ಷ ರೂ. ಮೌಲ್ಯದ ದುಬಾರಿ ಐಫೋನ್‌ಗಳನ್ನು ಕದ್ದು, ಮಾರಾಟ ಮಾಡಿ, ಐಶಾರಾಮಿ ಕಾರಲ್ಲಿ ಓಡಾಡುತ್ತ ಶೋಕಿ ಮಾಡಿದ ಘಟನೆ ಚೀನಾದ ಗ್ಯುಯ್‌ಜೋವ್ ಪ್ರದೇಶದ ರಾಜಧಾನಿ ಗ್ಯುಯಾಂಗ್ ನಗರದಲ್ಲಿ ನಡೆದಿದೆ.
ಆ್ಯಪಲ್ ಐಫೋನ್ 12-ಪ್ರೊ ಮ್ಯಾಕ್ಸ್ ಮಾರಾಟ ಮಾಡುವ ಮ್ಯುಟಿನಾ ಡೈನ್ಪಿಂಗ್ ಎಂಬ ಕಂಪನಿಯಿಂದ ನೇಮಕವಾಗಿದ್ದ ಟ್ಯಾಂಗ್ ಎಂಬ ಯುವಕ ಇಂಥ ಕೆಲಸ ಮಾಡಿದ್ದಾನೆ.
ಗ್ರಾಹಕರು ಆರ್ಡರ್ ಮಾಡಿದ ಐ ಫೋನ್‌ಗಳನ್ನು ಡಿಲೆವರಿ ಮಾಡುವುದು ಅವನ ಕೆಲಸವಾಗಿತ್ತು. ಆದರೆ, ಆರ್ಡರ್‌ಗಳನ್ನು ರದ್ದು ಮಾಡಿ, ರದ್ದತಿ ಶುಲ್ಕ 10 ಚೀನಿ ಯೆನ್ ಗಳನ್ನು ಕಂಪನಿಗೆ ಕಟ್ಟುತ್ತಿದ್ದ. ಯುವಕ ಫೋನ್‌ಗಳನ್ನು ಬೇರೆಯವರಿಗೆ ಮಾರುತ್ತಿದ್ದ. ಒಂದು ಫೋನನ್ನು ತನ್ನ ಸ್ನೇಹಿತನಿಗೆ ಕೊಡಬೇಕಿದ್ದ ಸಾಲಕ್ಕಾಗಿ ಮಾರಾಟ ಮಾಡಿದ್ದ. ಹೀಗೆ 1.80 ಲಕ್ಷ ಚೀನೀ ಯೆನ್ ಮೌಲ್ಯದ 12 ಐ ಫೋನ್‌ಗಳನ್ನು ಆತ ಕದ್ದಿದ್ದ.
ಕಂಪನಿಗೆ ಆತನ ಕೃತ್ಯ ತಿಳಿಯುವ ಹೊತ್ತಿಗೆ ಆತ ನಾಪತ್ತೆಯಾಗಿದ್ದ. ದುಬಾರಿ ಬೆಲೆಯ ಬಟ್ಟೆಗಳನ್ನು ಕೊಂಡಿದ್ದ. 600 ಯೆನ್ ನೀಡಿ ಬಿಎಂಡಬ್ಲು ಕಾರನ್ನು ಬಾಡಿಗೆಗೆ ಪಡೆದಿದ್ದ. ಪೊಲೀಸರು ಆತನನ್ನು ಬಂಧಿಸಿದ್ದು, 8 ಐ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.