ಬೀಜಿಂಗ್: ಸಂಪೂರ್ಣ ಗ್ಲಾಸ್ ನಿಂದ ಆವೃತವಾಗಿರುವ ಸೇತುವೆಯೊಂದನ್ನು ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ ನಲ್ಲಿ ನಿರ್ಮಿಸಲಾಗಿದೆ.
ಲಿಯಾಂಜುವ್ ನ ಹುವಾಂಗ್ಚುನ್ ತ್ರೀ ಗೋರ್ಜಸ್ ಕಣಿವೆ ಪ್ರದೇಶದಲ್ಲಿ ಲಿಯಾಂಜಿಂಗ್ ನದಿಗೆ 526 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದ್ದು, ಸದ್ಯ ಇದು ವಿಶ್ವದ ಅತಿ ದೊಡ್ಡ ಗ್ಲಾಸ್ ಸೇತುವೆ ಎಂಬ ದಾಖಲೆ ನಿರ್ಮಿಸಿದೆ. ಜು.18 ರಂದು ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿತು.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನ ಅಧಿಕೃತ ಪ್ರತಿನಿಧಿಗಳು ಆಗಮಿಸಿ ಪರಿಶೀಲಿಸಿ ವಿಶ್ವದ ಅತಿ ದೊಡ್ಡ ಸೇತುವೆ ಎಂದು ಘೋಷಿಸಿದ್ದಾರೆ.
ಸೇತುವೆಯ ನಡುವೆ 4 ವೀಕ್ಷಣಾ ಸ್ಥಳಗಳಿದ್ದು, ಒಮ್ಮೆ 500 ಜನ ವೀಕ್ಷಣೆಗೆ ನಿಲ್ಲಬಹುದಾಗಿದೆ.
ಸದ್ಯ ಸಾಮಾನ್ಯ ಪಾದಚಾರಿಗಳಿಗೆ ಮಾತ್ರ ಅವಕಾಶವಿದೆ. ಮುಂದೆ ಬಂಗಿ ಜಂಪಿಂಗ್, ಝಿಪ್ ಲೈನ್ ಮುಂತಾದ ಸಾಹಸ ಕ್ರೀಡೆಗಳೂ ಪ್ರಾರಂಭವಾಗಲಿವೆ.
4.5 ಸೆಂಟಿ ಮೀಟರ್ ದಪ್ಪದ ಲ್ಯಾಮಿನೇಟೆಡ್ ಗ್ಲಾಸನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ.
ಪೂರ್ವ ಚೀನಾ ಜಿಯಾಂಗ್ಸು ಪ್ರದೇಶದ ಹುವಾಕ್ಸಿ ವರ್ಡ್ ಎಡ್ವೆಂಚರ್ ಪಾರ್ಕ್ ನಲ್ಲಿ ನೆಲಮಟ್ಟದಿಂದ 100 ಮೀಟರ್ ಎತ್ತರದಲ್ಲಿ 518 ಮೀ ಉದ್ದದ ಇನ್ನೊಂದು ಗ್ಲಾಸ್ ಸೇತುವೆಯನ್ನು 2019 ರಲ್ಲಿ ನಿರ್ಮಿಸಲಾಗಿದೆ. ಪ್ರತಿ ಕಂಬವೂ 4.7 ಟನ್ ನಷ್ಟು ಭಾರ ತಡೆದುಕೊಳ್ಳಬಲ್ಲದು. 3.5 ಸೆಂಟಿಮೀಟರ್ ದಪ್ಪದ ಗ್ಲಾಸ್ ಬಳಸಿ ಸೇತುವೆ ನಿರ್ಮಿಸಲಾಗಿದ್ದು, 2600 ಜನರು ಇದರ ಮೇಲೆ ಒಮ್ಮೆಲೇ ನಿಲ್ಲಬಹುದಾಗಿದೆ. ಅದು ವಿಶ್ವದ ಎರಡನೇ ಅತಿ ದೊಡ್ಡ ಗ್ಲಾಸ್ ಸೇತುವೆಯಾಗಿದೆ.