ಕಂಬಳಿಗಳನ್ನ ಸಾಮಾನ್ಯವಾಗಿ ಶಾಖವನ್ನ ಹೆಚ್ಚು ಮಾಡೋಕೆ ಬಳಸಾಗುತ್ತೆ. ಆದರೆ ಚೀನಾದ ವಿಜ್ಞಾನಿಗಳು ಕಂಬಳಿಗಳ ಅಸಾಧಾರಣ ಬಳಕೆಯನ್ನ ಪರಿಚಯಿಸಿದ್ದಾರೆ. ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಸಿದ್ಧವಾದ ಕಂಬಳಿಗಳಿಂದ ಹಿಮನದಿಗಳನ್ನ ಮುಚ್ಚಲಾಗ್ತಿದೆ.
ಅಂದ ಹಾಗೆ ಇವೆಲ್ಲ ನಾವು ಮನೆಯಲ್ಲಿ ಬಳಕೆ ಮಾಡುವಂತಹ ಕಂಬಳಿಗಳಲ್ಲ. ಇವು ಅತ್ಯಂತ ದುಬಾರಿ ಹಾಗೂ ಸುಧಾರಿ ಜಿಯೋಟೆಕ್ಸ್ಟೈಲ್ನಿಂದ ಮಾಡಲಾದ ಕಂಬಳಿಯಾಗಿದ್ದು ಪರಿಸರ ಸ್ನೇಹಿಯಾಗಿದೆ. ಇದನ್ನ ವಿಜ್ಞಾನಿಗಳೇಕೆ ಹಿಮನದಿಗಳಿಗೆ ಹೊದಿಸುತ್ತಿದ್ದಾರೆ ಎಂದು ನೀವು ಕೇಳಬಹುದು.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮನದಿಗಳ ಕರಗುವಿಕೆಯನ್ನ ಕಡಿಮೆ ಮಾಡುವ ಸಲುವಾಗಿ ಈ ಕಂಬಳಿಗಳನ್ನ ಬಳಕೆ ಮಾಡಲಾಗ್ತಿದೆ. ಇವು ಹಿಮನದಿಯ ಮೇಲ್ಮೈ ಹಾಗೂ ಸೂರ್ಯನ ನಡುವಿನ ಗುರಾಣಿಯಾಗಿ ಕಾರ್ಯ ನಿರ್ವಹಿಸುತ್ತೆ. ಇದರಿಂದ ಸೂರ್ಯನ ಶಾಖ ನೇರವಾಗಿ ಹಿಮನದಿಯ ಮೇಲೆ ಬೀಳೋದು ತಪ್ಪುತ್ತೆ.
ಕಂಬಳಿಗಳು ಶಾಖವನ್ನ ಕಡಿಮೆ ಮಾಡುತ್ತವಾ ಎಂಬ ಕಲ್ಪನೆಯನ್ನ ಆಧಾರ ರಹಿತವೇನಲ್ಲ. ಭೂಮಿಯ ಮೇಲ್ಮೈ ತಾಪಮಾನದಿಂದ ಹಿಮನದಿಗಳು ಕರಗುವ ಪ್ರಮಾಣವನ್ನ ಈ ಕಂಬಳಿಗಳು ಕಡಿಮೆ ಮಾಡುತ್ತವೆ. ಚೀನಾದ ಹೊರತಾಗಿ ಸ್ವಿಡ್ಜರ್ಲೆಂಡ್ನಲ್ಲೂ ಈ ವಿಧಾನವನ್ನ ದಶಕಗಳಿಂದ ಬಳಸಲಾಗುತ್ತಿದೆ.
ಮಾನವ ಹಸ್ತಕ್ಷೇಪ, ಚಟುವಟಿಕೆಗಳು, ಕೈಗಾರಿಕೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿ, ಹಿಮನದಿಗಳು ಕಳೆದ ದಶಕಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿವೆ. ಹಿಮನದಿಗಳು ನದಿಗಳಿಗೆ ಸಿಹಿನೀರಿನ ಮೂಲವಾಗಿದೆ ಮತ್ತು ವೇಗವಾಗಿ ಕರಗುವುದರಿಂದ 2 ಅಪಾಯವಿದೆ.
ಮೊದಲನೆಯದಾಗಿ, ಸೀಮಿತ ಸಿಹಿನೀರಿನ ಸಂಪನ್ಮೂಲ ಬೇಗ ಖಾಲಿಯಾಗುತ್ತದೆ, ಎರಡನೆಯದಾಗಿ, ಹೆಚ್ಚುವರಿ ನೀರು ಸಾಗರಗಳಲ್ಲಿ ಹರಿಯುವುದರಿಂದ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ನಂತರದ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತದೆ.