ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಿ ಒಂದೂವರೆ ವರ್ಷವಾಗಿದೆ. ಆದರೆ ಈ ವೈರಸ್ ಎಲ್ಲಿಂದ ಹುಟ್ಟಿತು ಎಂಬ ಬಗ್ಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಏತನ್ಮಧ್ಯೆ ಯುಎಸ್ ಗುಪ್ತಚರ ವರದಿಯೊಂದು ಮಹತ್ವದ ವಿಷ್ಯ ಬಹಿರಂಗಪಡಿಸಿದೆ. ಕೊರೊನಾ ಹರಡಲು ಒಂದು ತಿಂಗಳ ಮೊದಲು ಅಂದ್ರೆ ಮೂರು ತಿಂಗಳ ಹಿಂದೆ ಚೀನೀ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾಗಿದ್ದರಂತೆ.
ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರು 2019 ರ ನವೆಂಬರ್‌ನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ವುಹಾನ್ ಲ್ಯಾಬ್‌ನಲ್ಲಿ ಅನಾರೋಗ್ಯಕ್ಕೆ ಒಳಗಾದ ಸಂಶೋಧಕರ ಸಂಖ್ಯೆ, ಸಮಯ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಕೊರೊನಾ ವೈರಸ್‌ನ ಉಗಮದ ಬಗ್ಗೆ ಮುಂದಿನ ಹಂತದ ತನಿಖೆಯನ್ನು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ನಡೆಸುವ ಸಭೆಯಲ್ಲಿ ಇದು ಚರ್ಚೆಯಾಗುವ ಸಾಧ್ಯತೆಯಿದೆ.
ಕೊರೊನಾ ವೈರಸ್‌ಗೆ ಸಂಬಂಧಿಸಿದ ಸಂಗತಿಗಳನ್ನು ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ವುಹಾನ್‌ಗೆ ಹೋಗಿತ್ತು. ಈ ಸಮಯದಲ್ಲಿ ತಂಡವು, ವುಹಾನ್ ಲ್ಯಾಬ್‌ಗೆ ಭೇಟಿ ನೀಡಿತ್ತು. ವುಹಾನ್‌ನ ಪ್ರಯೋಗಾಲಯದಿಂದ ಕೊರೊನಾ ವೈರಸ್ ಪ್ರಪಂಚದಾದ್ಯಂತ ಹರಡಿತು ಎಂದು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯವಿಲ್ಲವೆಂದು ಡಬ್ಲ್ಯುಎಚ್ಒ ಹೇಳಿತ್ತು.