ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾ ವೈರಸ್ ಲಸಿಕೆ ನವಂಬರ್ ಗಿಂತ ಮೊದಲೇ ಸಾರ್ವಜನಿಕ ಬಳಕೆಗೆ ಸಿದ್ಧವಾಗಬಹುದು ಎಂದು ಚೀನಾದ ರೋಗ ನಿಯಂತ್ರಣ ಮತ್ತು ರೋಗ ತಡೆ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋವಿಡ್ -19 ತಡೆಗೆ ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 4 ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತದಲ್ಲಿದ್ದು ಜುಲೈನಲ್ಲಿ ಪ್ರಾರಂಭಿಸಲಾದ ತುರ್ತು ಬಳಕೆ ಕಾರ್ಯಕ್ರಮಗಳಡಿ ಕನಿಷ್ಠ ಮೂರು ಅಗತ್ಯ ಕಾರ್ಮಿಕರಿಗೆ ಅವುಗಳನ್ನು ನೀಡಲಾಗಿದೆ. ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಸುರಕ್ಷಿತವಾಗಿ ನಡೆಯುತ್ತಿದೆ. ಲಸಿಕೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಾರ್ವಜನಿಕ ಬಳಕೆಗೆ ಸಿದ್ಧವಾಗಬಹುದು ಎಂದು ಮುಖ್ಯ ಜೈವಿಕ ಸುರಕ್ಷತಾ ತಜ್ಞ ಗುಯಿಜೆನ್ ಸೋಮವಾರ ತಡರಾತ್ರಿ ಸಂದರ್ಶನದಲ್ಲಿ ಹೇಳಿದ್ದಾರೆ.
ಏಪ್ರಿಲ್ ನಲ್ಲಿ ಸ್ವತಃ ಪ್ರಾಯೋಗಿಕ ಲಸಿಕೆ ತೆಗೆದುಕೊಂಡ ನಂತರದಲ್ಲಿ ಇತ್ತೀಚೆಗೆ ಯಾವುದೇ ಅಸಹಜ ಲಕ್ಷಣ ಕಂಡುಬಂದಿಲ್ಲ. ಲಸಿಕೆ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ. ಔಷಧೀಯ ದೈತ್ಯ ಚೀನಾ ನ್ಯಾಷನಲ್ ಫಾರ್ಮಸ್ಯುಟಿಕಲ್ ಗ್ರೂಪ್(ಸಿನೋಫಾರ್ಮ್) ಮತ್ತು ಅಮೆರಿಕದ ಕ್ಯಾನ್ಸಿನೋ ಬಯಾಲಜಿಕ್ಸ್ ಅಭಿವೃದ್ಧಿಪಡಿಸುತ್ತಿರುವ 4ನೇ ಕೋವಿಡ್-19 ಲಸಿಕೆಯನ್ನು ಚೀನಾದ ಮಿಲಿಟರಿ ಜೂನ್ನಲ್ಲಿ ಬಳಕೆಗೆ ಅನುಮೋದನೆ ನೀಡಿದೆ. ಮೂರನೇ ಹಂತದ ಪ್ರಯೋಗ ಮುಗಿದ ನಂತರ ವರ್ಷಾಂತ್ಯದ ವೇಳೆಗೆ ಸಾರ್ವಜನಿಕ ಬಳಕೆಗೆ ಲಸಿಕೆ ಸಿದ್ಧವಾಗುವುದು ಎಂದು ಸಿನೋಫಾರ್ಮ್ ತಿಳಿಸಿದೆ.