ಸೈಬೀರಿಯಾ: ಬಿದ್ದ ನೀರ ಹನಿಗಳು ಐಸ್ ಆಗುವಷ್ಟು ಕೊರೆಯುವ ಚಳಿ. ಅಂಥ ವಾತಾವರಣದಲ್ಲಿ ಮಕ್ಕಳು ಹೊರ ಬಿದ್ದರೆ ಥಂಡಿಯಾದೀತು ಎಂದು ನಾವು ಹೇಳುವುದಿದೆ.
ಆದರೆ ಸೈಬೀರಿಯಾದ ಪುಟಾಣಿಗಳು ಐಸ್ ಬಾತ್ ಮಾಡುತ್ತಾರೆ. ಕೆಲ ವರ್ಷದ ಹಿಂದೆ ಐಸ್ ಬಕೆಟ್ ಚಾಲೆಂಜ್ ಜಾಲತಾಣದಲ್ಲಿ ಹರಿದಾಡಿತ್ತು. ಇದು ಅಂಥ ಚಾಲೆಂಜ್ ಅಲ್ಲ. ಆರೋಗ್ಯ ರಕ್ಷಣೆಗೆ ಮಕ್ಕಳು ಅನುಸರಿಸುತ್ತಿರುವ ವಿಧಾನ ಇದು!
ಕ್ರಾಸ್ನೊಯಾರ್ಸ್ಕ್ ಎಂಬ ಪ್ರದೇಶದ ಸ್ಟೇಟ್ ಕಿಂಡರ್ ಗಾರ್ಡನ್ 317 ಮಕ್ಕಳು ಕೊರೆಯುವ ಚಳಿಯಲ್ಲಿ ಹಿಮ ಸ್ನಾನ ಮಾಡಿದ್ದಾರೆ. ಅಂಡರ್ ವೇರ್ ನಲ್ಲಿ ನಿಂತು ಬಕೆಟ್ ನೀರನ್ನು ಮೈ ಮೇಲೆ ಹೊಯ್ದುಕೊಂಡಿದ್ದಾರೆ.
“ಚಳಿಗಾಲದ ಸಂದರ್ಭದಲ್ಲಿ ಜ್ವರ ಮುಂತಾದ ಸಾಂಕ್ರಾಮಿಕ ರೋಗದಿಂದ ದೂರ ಇರಲು ಹಿಮ ಸ್ನಾನ ಸಹಕಾರಿ. ಇದು ಮಕ್ಕಳಿಗೆ ಕಡ್ಡಾಯವಲ್ಲ. ಹಿಮ ಸ್ನಾನಕ್ಕೂ ಪೂರ್ವ ಮಕ್ಕಳು ಬಿಸಿ ಆವಿ ಸ್ನಾನ ಮಾಡುತ್ತಾರೆ” ಎಂದು ಮಹಿಳಾ ಪ್ರಿ- ಸ್ಕೂಲ್ ಟೀಚರ್ ಹಾಗೂ ಸ್ವಿಮ್ಮಿಂಗ್ ಕೋಚ್ ಒಕ್ಸಾನಾ ಕೊಬೊಕ್ತೊ ಹೇಳಿದ್ದಾರೆ.