ಪರೀಕ್ಷಾ ಕೊಠಡಿಯಲ್ಲೇ ಇನ್ನೇನು ಹೆರಿಗೆ ಆಗಿಬಿಡಬಹುದು ಎಂಬ ಪರಿಸ್ಥಿತಿ ನೆಲೆಸಿದರೂ ಸಹ ಬಾರ್ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಭಾಗಿಯಾದ ಮಹಿಳೆಯೊಬ್ಬರು ಭಾರೀ ಸುದ್ದಿ ಮಾಡಿದ್ದಾರೆ.
ಷಿಕಾಗೋದ ಲಾಯೊಲಾ ವಿವಿಯಲ್ಲಿ ಇತ್ತೀಚೆಗೆ ಕಾನೂನು ವಿಷಯದಲ್ಲಿ ಪದವಿ ಮುಗಿಸಿದ ಬ್ರಯಾನ್ನಾ ಹಿಲ್, ಜುಲೈ 28ರಂದು ಇಲಿನಾಯಿ ಬಾರ್ ಪರೀಕ್ಷೆಯನ್ನು ತೆಗೆದುಕೊಳ್ಳುವವರಿದ್ದರು. ಆದರೆ ಕೋವಿಡ್-19 ಕಾರಣದಿಂದ ಅಕ್ಟೋಬರ್‌ಗೆ ಮುಂದೂಡಲಾದ ಪರೀಕ್ಷೆ ವೇಳೆ ಬ್ರಯಾನ್ನಾ ಹೆರಿಗೆ ಸಂಭವಿಸಿದೆ.
ತಲಾ 90 ನಿಮಿಷಗಳ ಅವಧಿಗೆ ಬರೆಯಲಾಗುವ ನಾಲ್ಕು ವಿಭಾಗಗಳಿರುವ ಈ ಪರೀಕ್ಷೆಯನ್ನು ಎರಡು ದಿನಗಳ ಮಟ್ಟಿಗೆ ಹಮ್ಮಿಕೊಳ್ಳಲಾಗಿತ್ತು. ಪರೀಕ್ಷೆ ಬರೆಯವ ಅಷ್ಟೂ ಅವಧಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಮುಂದೆಯೇ ಕುಳಿತುಕೊಳ್ಳಬೇಕಾಗಿತ್ತು.
ಕೊನೆಗೆ ಪರೀಕ್ಷೆ ಬರೆದ ಬಳಿಕ ಪತಿ ನೆರವಿನೊಂದಿಗೆ ಆಸ್ಪತ್ರೆಗೆ ತೆರಳಿದ ಹಿಲ್, ಮಗುವಿಗೆ ಜನ್ಮವಿತ್ತಿದ್ದಾರೆ. ಮಗುವಿಗೆ ಫಿಲಿಪ್ ಹಿಲ್ ಆಂಡ್ರ‍್ಯೂ ಎಂದು ಹೆಸರಿಡಲಾಗಿದೆ.