ಕ್ಯಾಲಿಫೋರ್ನಿಯಾ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೊ ಬಿಡೆನ್ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಆಯ್ಕೆಯಾಗಿದ್ದಾರೆ. ಅವರ ಗೆಲುವಿಗೆ ಹಿಂದಿ ಘೋಷಣೆಗಳೂ ಕಾರಣವಾದವು ಎಂದರೆ ಅಚ್ಚರಿ ಉಂಟಾಗುತ್ತದೆ.
ಭಾರತೀಯ ಮೂಲದ ಅಮೆರಿಕಾ ಕ್ಯಾಲಿಫೋರ್ನಿಯಾದ ಉದ್ಯಮಿ, ಬರಹಗಾರ ಡೆಮಾಕ್ರೆಟಿಕ್ ಪಕ್ಷದ ಮುಖಂಡ ಅಜಯ್ ಜೈನ್ ಹಾಗೂ ಅವರ ಪತ್ನಿ ಸೇರಿ ಹಲವು ಘೋಷಣೆಗಳನ್ನು ಸಿದ್ಧಪಡಿಸಿದ್ದು, ಪ್ರಚಾರದಲ್ಲಿ ಸಾಕಷ್ಟು ಪ್ರಸಿದ್ಧವಾಗಿದ್ದವು.
ಅಜಯ್ ಜೈನ್ ಅವರು 14 ಭಾರತೀಯ ಭಾಷೆಗಳಲ್ಲಿ ಪ್ರಚಾರ ಘೋಷಣೆಗಳನ್ನು ಸಿದ್ಧಪಡಿಸಿದ್ದರು. ಅವು ಸಾಕಷ್ಟು ಗಮನ ಸೆಳೆದವು. ‘ಅಮೆರಿಕಾ ಕಾ ನೇತಾ ಕೈಸಾ ಹೋ -ಜೊ ಬಿಡೆನ್ ಜೈಸಾ ಹೊ, ಟ್ರಂಪ್ ಹಠಾವೋ- ಅಮೆರಿಕಾ ಬಚಾವೊ, ಬಿಡೆನ್, ಹ್ಯಾರೀಸ್ ಕೊ ಜಿತಾವೊ ಅಮೆರಿಕಾಕೊ ಆಗೇ ಬಡಾವೊ, ಜಾಗೋ ಅಮೆರಿಕಾ ಜಾಗೋ, ಬಿಡೆನ್ ಹ್ಯಾರೀಸ್ ಕೋ ವೋಟ್ ದೊ, ಚಲೆ ಚಲೋ ಚಲೇ ಚಲೋ ಬಿಡೆನ್ ಹ್ಯಾರೀಸ್ ಕೋ ವೋಟ್ ದೊ’ ಹೀಗೆ ಹತ್ತಾರು ಸ್ಲೋಗನ್‌ಗಳನ್ನು ರಚಿಸಿದ್ದೆವು ಇವು ಅಮೆರಿಕಾದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ ಮತದಾರರನ್ನು ಸೆಳೆದವು ಎನ್ನುತ್ತಾರೆ ಅಜಯ್ ಜೈನ್.
ಭಾರತೀಯ ಮೂಲದವರು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂಬ ಆರೋಪವಿತ್ತು. ನೀವು ಎಂದಾದರೂ ಅವರ ಭಾಷೆಯಲ್ಲಿ ಮತ ಕೇಳಿದ್ದೀರಾ ಎಂದು ನಾನು ನಮ್ಮ ಪಕ್ಷದವರಿಗೆ ಕೇಳಿದೆ. ಅಮೆರಿಕಾದಲ್ಲಿ ಇದ್ದ ಎಲ್ಲರಿಗೂ ಇಂಗ್ಲಿಷ್ ಬರಬೇಕು ಎಂದಿಲ್ಲ. ಇಂಗ್ಲಿಷ್ ಬಂದರೂ ತಮ್ಮ ಮಾತೃಭಾಷೆಯಲ್ಲಿ ನಡೆಸುವ ಕ್ಯಾಂಪೇನಿಂಗ್ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಅದೇ ರೀತಿ ನಾವು ಮಾಡಿದ ಪ್ರಯತ್ನ ಯಶಸ್ವಿಯಾಯಿತು ಎಂದು ಮಾಧ್ಯಮ ಸಂಸ್ಥೆಗಳ ಜತೆ ಅಜಯ್ ಜೈನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.