ನ್ಯೂಯಾರ್ಕ್: ಅಮೆರಿಕಾದಲ್ಲಿ ಈಗ ಸೆಲೆಬ್ರಿಟಿಗಳು ಫೇಸ್ ಬುಕ್, ಇನ್ಸ್ಟಾಗ್ರಾಂ ವಿರುದ್ಧ ದ್ವೇಷ ಭಾಷಣ ನಿಲ್ಲಿಸಿ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಕಾವು ಏರಿದೆ. ಇದರಿಂದ ರಾಜಕೀಯ ಮುಖಂಡರು ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸಿದ್ದಾರೆ. ಅದಕ್ಕಾಗಿ ಫೇಸ್ ಬುಕ್, ಇನ್ಸ್ಟಾಗ್ರಾಂ ನಂಥ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಜಾಲತಾಣ ಬಳಕೆದಾರರಿಗೆ ಬೇಸರ ತರಿಸಿದೆ. ಪ್ರಮುಖವಾಗಿ ಸೆಲೆಬ್ರಿಟಿಗಳು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಎಂಟಿ ಡಿಫಾಮೇಶನ್ ಲೀಗ್ ಎಂಬ ಒಕ್ಕೂಟದ ಮೂಲಕ ಅಮೆರಿಕಾದ ಹಲವು ನಟರು, ಪ್ರಭಾವಿಗಳು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂಗೆ ಎಚ್ಚರಿಕೆ ನೀಡಿದ್ದಾರೆ. ದ್ವೇಷ ಭಾಷಣ, ತಪ್ಪು ಮಾಹಿತಿಗಳಿಗೆ ಕಡಿವಾಣ ಹಾಕಿ ಇಲ್ಲವೇ ನಾವು ನಿಮ್ಮನ್ನು ಬಿಟ್ಟು ಹೋಗುತ್ತೇವೆ. ಖಾತೆಗಳನ್ನು “ಫ್ರೀಜ್” ಮಾಡಿ ಇಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದು ಅಕಸ್ಮಾತ್ತಾಗಿ ಆಗುತ್ತಿರುವುದಲ್ಲ. ಉದ್ದೇಶಪೂರ್ವಕವಾಗಿ ಲಾಭಕ್ಕೋಸ್ಕರ ಜಾಲತಾಣ ಸಂಸ್ಥೆಗಳು ಈ ಕೆಲಸ ಮಾಡುತ್ತಿವೆ. ಅಮೆರಿಕಾ ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಹಲವರು ದೂರಿದ್ದಾರೆ. ಜೆನ್ನಿಫರ್ ಲಾರೆನ್ಸ್, ಸಚಾ ಬಾರೋನ್ ಚೋಹೇನ್, ಕಿಮ್ ಕರ್ದೇಶಿಯನ್, ಮಾರ್ಕ್ ರಫೆಲೊ ಸೇರಿ ಹಲವರು ಟ್ವಿಟ್ಟರ್ ನಲ್ಲಿ ಸ್ಟಾಪ್ ಹೇಟ್ ಸ್ಪೀಚ್ ಎಂಬ ಸಂದೇಶ ಹಾಕಿದ್ದಾರೆ.