ಸತತ ಮಳೆ, ಪ್ರವಾಹದಿಂದಾಗಿ ಚೀನಾದಲ್ಲಿ 2 ದಶಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೀಜಿಯಾಂಗ್ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಉಕ್ಕೇರಿ ಹರಿಯುತ್ತಿರುವ ನೀರು ಕಟ್ಟಡ ಸೇರಿದಂತೆ ಎಲ್ಲವನ್ನೂ ಆಪೋಶನ ಪಡೆಯುತ್ತಿದೆ.
ದಕ್ಷಿಣ ಹಾಗೂ ಪೂರ್ವ ಚೀನಾದಲ್ಲಿ ಹೆಚ್ಚಿನ ಸಮಸ್ಯೆಯಾಗಿದ್ದು, ಗಾಂಗ್ಸಿ ಪ್ರದೇಶವೊಂದರಲ್ಲೇ 1.5 ಲಕ್ಷ ಜನರನ್ನು ಮನೆ ಖಾಲಿ ಮಾಡಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ನದಿಯ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ಮೂರಂತಸ್ತಿನ ಕಟ್ಟಡವೊಂದು ನೋಡ ನೋಡುತ್ತಲೇ ನೀರಿನ ಸೆಳೆತಕ್ಕೆ ಸಿಲುಕಿ ನದಿಯೊಳಕ್ಕೇ ಕುಸಿದು ಬೀಳುವ ದೃಶ್ಯ ಸೆರೆಯಾಗಿದ್ದು, ಭಯ ಹುಟ್ಟಿಸುವಂತಿದೆ.
ಕಟ್ಟಡದ ಅಡಿಪಾಯ ಸರಿಯಾಗಿ ಇಲ್ಲದೇ ಇದ್ದರಿಂದ ಕಟ್ಟಡ ಕುಸಿತಗೊಂಡಿದೆ. ಘಟನೆಗೂ ಮೊದಲೇ ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.