ನ್ಯೂಯಾರ್ಕ್: ಮಹಾ ನಗರದ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ನಾಪತ್ತೆಯಾದ ಬೆಕ್ಕೊಂದು ಬರೊಬ್ಬರಿ 11 ದಿನಗಳ ನಂತರ ಪತ್ತೆಯಾಗಿದೆ. ಅದೂ ಒಂದು ನಾಯಿಯ ಸಹಾಯದಿಂದ ಎಂಬುದೇ ವಿಶೇಷ.
ಕ್ರಿಸ್ ಮಸ್ ಈವ್ ಸಮಯದಲ್ಲಿ ಟೇಲರ್ ಲೇ ಅವರ ಪ್ರೀತಿಯ ಬೆಕ್ಕು ಮುಜ್ಜಿ ಏರ್ ಪೋರ್ಟ್ ನಲ್ಲಿ ಅವರ ಕೈ ತಪ್ಪಿಸಿಕೊಂಡಿತ್ತು. ನಂತರ ಅದು ನಿಲ್ದಾಣದ ಸೀಲಿಂಗ್ ನಲ್ಲಿ ಸಿಲುಕಿಕೊಂಡಿತ್ತು. ಕೊಬೆಗೆ ನಾಯಿಯೊಂದು ಅದನ್ನು ಹುಡುಕಿಕೊಟ್ಟಿದೆ.
ಟೇಲರ್ ತಮ್ಮ ಕುಟುಂಬದ ಜತೆ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮೂಲ ಮನೆಗೆ ತೆರಳುತ್ತಿದ್ದರು. ಆಗ ಮುಜ್ಜಿ ಟೇಲರ್ ಅವರ ಬ್ಯಾಗ್ ನಲ್ಲಿತ್ತು. ಏರ್ ಪೋರ್ಟ್ ಅಧಿಕಾರಿಗಳು ಬೆಕ್ಕನ್ನು ಹೊರ ತೆಗೆಯಲು ಹೇಳಿದರು. ಬೆಕ್ಕು ಮೆಟಲ್ ಡಿಟೆಕ್ಟರ್ ಬಳಿ ಬರುತ್ತಿದ್ದಂತೆ ಹೆದರಿ ಯಜಮಾನನ ಕೈ ಕಚ್ಚಿ ಪರಾರಿಯಾಗಿತ್ತು. ಇದರಿಂದ ಟೇಲರ್ ತೀವ್ರ ಬೇಸರಗೊಂಡಿದ್ದರು.