ಆ ಬೆಕ್ಕು ಮಲಗುವುದಕ್ಕೆ ಸೂಕ್ತ ಸ್ಥಳವೆಂದು ಭಾವಿಸಿ ಮಲಗಿದ ಸ್ಥಳವೇ ಅದರ ಜೀವಕ್ಕೆ ಕುತ್ತು ತರುತ್ತದೆ ಎಂದು ಅನಿಸಿರಲಿಲ್ಲ. ಆದರೆ ಅದೃಷ್ಟವಶಾತ್ ವಾಷಿಂಗ್ ಮೆಷಿನ್ ಆನ್ ಆದರೂ ಬದುಕಿರುವ ಘಟನೆ ನಡೆದಿದೆ.
ಹೌದು, ಕ್ವೀನ್ಸ್‌ಲ್ಯಾಂಡ್ ಸನ್‌ಶೈನ್ ಕೋಸ್ಟ್ ಭಾಗದಲ್ಲಿ ಈ ಘಟನೆ ನಡೆದಿದ್ದು, ರೆಸ್ಟ್ ಮಾಡಲೆಂದು ಬೆಕ್ಕೊಂದು ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಹೋಗಿ ಮಲಗಿದೆ. ಆದರೆ ಬೆಕ್ಕು ಮಲಗಿರುವುದನ್ನು ಗಮನಿಸದೇ, ಮನೆಯವರು ಸ್ವಿಚ್ ಆನ್ ಮಾಡಿದ್ದಾರೆ. ಬಟ್ಟೆ ಒಗೆಯುವುದು ಪೂರ್ಣಗೊಂಡರೂ, ಬದುಕಿರುವುದು ಅಚ್ಚರಿಗೆ ಕಾರಣವಾಗಿದೆ.
ಆಸ್ಕರ್ ಹೆಸರಿನ ಬೆಕ್ಕು ವಾಷಿಂಗ್ ಮೆಷಿನ್‌ನಲ್ಲಿ ಮಲಗಿದ್ದಾಗ, ಅಮಂಡಾ ಅವರ ಪತಿ ಆಂಜೆಲೋ ಬೆಡ್‌ಶೀಟ್ ಅನ್ನು ಮಿಷನ್ ಒಳಗೆ ಹಾಕಿದ್ದಾರೆ. ಈ ವೇಳೆ ಬೆಕ್ಕಿನ ಶಬ್ದ ಕೇಳಿದರೂ, ಅದು ಬೇರೆ ಕಡೆಯಿದೆ ಎಂದುಕೊಂಡು ಮಿಷಿನ್ ಆನ್ ಮಾಡಿದ್ದಾರೆ. ಬಟ್ಟೆ ಒಣಹಾಕಲು ತೆರೆದಾಗ ಬೆಕ್ಕು ಒಳಗಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಮೆಷಿನ್ ಒಳಗೆ ಕೂತಿದ್ದರಿಂದ ಚಿಕ್ಕಪುಟ್ಟ ಗಾಯಗಳಾಗಿವೆ ಹೊರತು, ಜೀವಕ್ಕೆ ಯಾವ ಹಾನಿಯೂ ಸಂಭವಿಸಿಲ್ಲವೆಂದು ದಂಪತಿಗಳು ಹೇಳಿದ್ದಾರೆ. ಮೆಷಿನ್‌ನಲ್ಲಿ ಕೂತಿದ್ದರೂ, ಜೀವವನ್ನು ಉಳಿಸಿಕೊಂಡಿರುವ ಬೆಕ್ಕನ್ನು ಇದೀಗ ಎಲ್ಲರೂ ಕೊಂಡಾಡಿದ್ದಾರೆ.