ಕೊರೊನಾ ವೈರಾಣುಗಳು ಗಾಳಿಯ ಮೂಲಕ ತೇಲಾಡಬಲ್ಲದೆ ? ಗಾಳಿಯ ಮೂಲಕ ಹರಡಬಲ್ಲದೆ ? ಎಂಬ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಆದರೆ, ಗಾಳಿ ಮೂಲಕವೂ ಹರಡುತ್ತಿದೆ ಎನ್ನುತ್ತಾರೆ ತಜ್ಞರು. ಅಂತಹ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಕೆಮ್ಮಿದಾಗ, ಸೀನಿದಾಗ, ಹಾಡಿದಾಗ, ಕೂಗಾಡಿದಾಗ, ಮಾತನಾಡಿದಾಗ ಹಾಗೂ ಉಸಿರಾಡಿದಾಗಲೂ ಸಿಡಿಯುವ ಎಂಜಲಿನ ಕಣಗಳು ತೀರಾ ಸಣ್ಣದಿದ್ದರೆ ಗಾಳಿಯಲ್ಲಿ ತೇಲುತ್ತದೆ. ಎಂಜಲಿನ ದೊಡ್ಡ ಕಣಗಳು ಗಾಳಿಯಲ್ಲಿ ತೇಲದೆ ಭೂಮಿಯ ಮೇಲೆ ಬೀಳುತ್ತವೆ. ಈ ಕಾರಣಕ್ಕಾಗಿಯೇ ಪರಸ್ಪರ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವ ನಿಯಮ ಮಾಡಿರುವುದು.
ಸರಿಯಾಗಿ ಗಾಳಿಯಾಡದ, ವಾತಾನುಕೂಲ ಇಲ್ಲದ ಒಳಾಂಗಣ, ಮುಚ್ಚಿದಂತಿರುವ ಕೋಣೆಗಳಲ್ಲಿ ಅತಿ ಚಿಕ್ಕ ಕಣಗಳು ಕೆಲ ನಿಮಿಷದಿಂದ ಗಂಟೆಗಳವರೆಗೂ ಗಾಳಿಯಲ್ಲಿ ತೇಲಬಹುದು. ಈ ಸಂದರ್ಭದಲ್ಲಿ ಉಸಿರಾಡಿದರೂ ಕೊರೊನಾ ವೈರಾಣು ನಮ್ಮ ದೇಹ ಪ್ರವೇಶಿಸುತ್ತದೆ.
ಹೀಗಾಗಿ ಇಂತಹ ಸ್ಥಳಗಳಲ್ಲಿ ಸುರಕ್ಷಾ ಕ್ರಮ ತೆಗೆದುಕೊಳ್ಳಲೇಬೇಕು. ವಾತಾವರಣಕ್ಕೆ ತೆರೆದುಕೊಳ್ಳುವಂತೆ ಕಿಟಕಿ, ಬಾಗಿಲುಗಳಿರಬೇಕು. ವಾಯುಸಂಸ್ಕರಣಾ ಯಂತ್ರಗಳಿರಬೇಕು. ಇಲ್ಲದಿದ್ದರೆ, ಹೊರಾಂಗಣದಲ್ಲಿ ಅಂತರ ಕಾಯ್ದುಕೊಂಡು ಮಾತನಾಡುವುದು, ಸಭೆಗಳನ್ನು ನಡೆಸುವುದು ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು.