ಬ್ರೆಸಿಲಿಯಾ: ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಮತ್ತು ಕಾರಿನ ನಡುವೆ ಅಪಘಾತ ನಡೆದು ನೂರಾರು ಜೀವಗಳಿಗೆ ಹಾನಿಯಾಗುವ ಭಾರೀ ಅನಾಹುತವೊಂದು ತಪ್ಪಿದೆ. ಬ್ರೆಜಿಲ್ ರೋಡ್ -330 ದಲ್ಲಿ 2019 ರ ಸೆಪ್ಟೆಂಬರ್ 21 ರಂದೇ ಘಟನೆ ನಡೆದಿದ್ದು, ಇತ್ತೀಚೆಗೆ 18 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಬಸ್ ತೆರಳುತ್ತಿರುವಾಗ ನೇರ ರಸ್ತೆಯ ನಂತರ ಸಿಗುವ ಸಣ್ಣ ತಿರುವಿನಲ್ಲಿ ಎದುರಿನಿಂದ ಕಾರೊಂದು ಇದ್ದಕ್ಕಿದ್ದಂತೆ ಅದರೆಡೆಗೆ ನುಗ್ಗುತ್ತದೆ. ಇನ್ನೇನು ಡಿಕ್ಕಿ ಸಂಭವಿಸುತ್ತದೆ ಎನ್ನುವಾಗ ಕಾರು ಚಾಲಕ ನಿಯಂತ್ರಣಕ್ಕೆ ತೆಗೆದುಕೊಂಡು ಪಕ್ಕಕ್ಕೆ ಕೊಂಡೊಯ್ಯುತ್ತಾನೆ. ಬಸ್ ಚಾಲಕ ಸಮಯ ಪ್ರಜ್ಞೆಯಿಂದ ಸ್ವಲ್ಪವೇ ಸ್ಟೇರಿಂಗ್ ತಿರಿಸಿ, ಕಾರಿನ ಜತೆ ಸಂಭವಿಸುತ್ತಿದ್ದ ಅಪಘಾತ ಹಾಗೂ ಬಸ್ ಪಲ್ಟಿಯಾಗಬಹುದಾಗಿದ್ದ ಸಂಭವವನ್ನು ತಪ್ಪಿಸುತ್ತಾನೆ. ನಂತರ ದೊಡ್ಡ ನಿಟ್ಟುಸಿರು ಬಿಟ್ಟು ತನ್ನ ಎದೆಯ ಮೇಲೆ ಕೈ ಇಟ್ಟು ಅಬ್ಬ ಬಚಾವಾದೆ ಎಂದು ಸಮಾಧಾನ ಹೇಳಿಕೊಳ್ಳುತ್ತಾನೆ.
ಬಸ್ ನಲ್ಲಿದ್ದ ಜನ ಆತಂಕದಿಂದ ನೋಡುತ್ತಾರೆ. ಚಾಲಕನ ಈ ತಕ್ಷಣದ ಪ್ರತಿಕ್ರಿಯೆಯ ವಿಡಿಯೋವನ್ನು ಸಾಕಷ್ಟು ಜನ ವೀಕ್ಷಿಸಿದ್ದಾರೆ. ಏಕೆಂದರೆ ಕಾರಿನ ಹಿಂದೆ ಮರದ ಪೋಲ್ ಗಳನ್ನು ತುಂಬಿದ್ದ ಬೃಹತ್ ಲಾರಿ ವೇಗವಾಗಿ ಬರುತ್ತಿತ್ತು. ಕಾರು-ಬಸ್ ನಡುವೆ ಅಪಘಾತ ಸಂಭವಿಸಿದ್ದರೆ ಲಾರಿಯೂ ಡಿಕ್ಕಿಯಾಗಿ ಸಾಕಷ್ಟು ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು.