ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಕಾಡ್ಗಿಚ್ಚು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಈ ಕೆನ್ನಾಲಗೆಯನ್ನು ನಂದಿಸುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತ್ತು.
ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಸಮೂಹವೊಂದು ಬೆಂಕಿ ನಂದಿಸುವ ಕೆಲಸದಲ್ಲಿ ತಲ್ಲೀನರಾಗಿದ್ದ ವೇಳೆ, ಅವರ ಮೇಲೆ ಕಾಡು ಕೋಣವೊಂದು ದಾಳಿ ಮಾಡಲು ಮುಂದಾಗಿದೆ.
’ಫರ್ಡಿನಂಡ್’ ಹೆಸರಿನ ಈ ಕೋಣವು ಸಿಬ್ಬಂದಿಯತ್ತ ರೋಷದಿಂದ ಮುನ್ನುಗ್ಗುತ್ತಿದ್ದರೆ, ಅವರೆಲ್ಲಾ ಭಯಭೀತರಾಗಿ ಎದ್ದೆವೋ ಬಿದ್ದೆವೋ ಎಂದು ದಿಕ್ಕಾಪಾಲಾಗಿ ಓಡಿದ್ದಾರೆ.
ಇದೇ ವೇಳೆ ಟ್ರಕ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಈ ಘಟನೆಯ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ವೆಂಚುರಾ ಕಂಟ್ರಿ ಅಗ್ನಿಶಾಮಕ ಇಲಾಖೆಯ ಫೇಸ್ಬುಕ್ ಪೇಜ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.