ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಗಡಿ ಸಂಘರ್ಷದ ನಂತರ ಚೀನಾ ಆಪ್ ಗಳನ್ನು ಭಾರತ ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೇ ಅಮೆರಿಕ ಚೀನಾ ಆಪ್ ನಿಷೇಧಿಸುವ ದಾರಿಯಲ್ಲಿದೆ.
ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾ ಆಪ್ ಗಳಿಗೆ ನಿಷೇಧ ಹೇರಲಾಗಿದ್ದು ಇದೇ ರೀತಿ ಅಮೆರಿಕ ಕೂಡ ಟಿಕ್ ಟಾಕ್ ನಂತಹ ಚೀನಾದ ಅಪ್ಲಿಕೇಶನ್ ಗಳನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಟಿಕ್ ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಆಪ್ ನಿಷೇಧಿಸುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮೈಕ್ ಪೊಂಪಿಯೋ ಹೇಳಿದ್ದಾರೆ.
ಇದರಿಂದಾಗಿ ಚೀನಾಗೆ ಮತ್ತೊಂದು ದೊಡ್ಡ ಹೊಡೆತ ಬೀಳಲಿದೆ. ಭಾರತದ ನಿರ್ಧಾರದಿಂದ ಚೀನಾ ಕಂಪನಿಗಳು ತತ್ತರಿಸಿದ್ದು, ಅಮೆರಿಕದಲ್ಲಿಯೂ ಟಿಕ್ ಟಾಕ್ ನಂತಹ ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿದರೆ ಮತ್ತಷ್ಟು ತತ್ತರಿಸಲಿವೆ. ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೈಕ್ ಪೊಂಪಿಯೋ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ನಾವು ಚೀನಾ ಆಪ್ ನಿಷೇಧಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಭಾರತ ಟಿಕ್ ಟಾಕ್ ಸೇರಿದಂತೆ ಸುಮಾರು 59 ಚೀನಾ ಆಪ್ ಗಳನ್ನು ನಿಷೇಧಿಸಿದ್ದು, ಆಸ್ಟ್ರೇಲಿಯಾದಲ್ಲಿಯು ಕೂಡ ಚೀನಾ ಆಪ್ ನಿಷೇಧಕ್ಕೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.