ಕ್ಯಾಲಿಫೋರ್ನಿಯಾದ ವಾಕಾವಿಲ್ಲೆ ಎಂಬಲ್ಲಿ ವಾಸಿಸುತ್ತಿರುವ ಚಾಡ್ ಲಿಟಲ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಿಯರ್ ಕ್ಯಾನ್‌ಗಳನ್ನು ಬಳಸಿದ್ದಾರೆ.
ಕಾಳ್ಗಿಚ್ಚೊಂದು ತಮ್ಮ ಮನೆಯತ್ತ ಕೆನ್ನಾಲಗೆ ಚಾಚಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಚಾಡ್ ಕುಟುಂಬ ತನ್ನೆಲ್ಲಾ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಡಲು ಸಿದ್ಧವಾಗಿತ್ತು. ಐದು ವರ್ಷಗಳ ಹಿಂದಿನ ಕಾಳ್ಗಿಚ್ಚಿನ ಕಾರಣದಿಂದ ತಮ್ಮ ಮನೆಯನ್ನು ಕಳೆದುಕೊಂಡಿದ್ದ ಚಾಡ್ ಈ ಬಾರಿ ಆ ರೀತಿ ಆಗದಂತೆ ಖಾತ್ರಿ ಪಡಿಸಲು ಮುಂದಾದರು.
ಮನೆ ಸುತ್ತಲಿನ ನೀರು ಪೂರೈಕೆ ಕೊಳಾಯಿಗಳನ್ನು ಬಂದ್ ಮಾಡಿದ್ದ ಕಾರಣ ತಕ್ಷಣಕ್ಕೆ ನೀರು ಸಿಗಲಿಲ್ಲ. ಆ ಸಂದರ್ಭದಲ್ಲಿದ್ದ ಒಂದು ಬ್ಯಾರೆಲ್ ನೀರನ್ನು ಬಳಸಿಕೊಂಡು ಅಷ್ಟು ಬೆಂಕಿಯನ್ನು ನಂದಿಸಲು ಆಗಲಿಲ್ಲ. ಆಗ ತಮ್ಮ ಬಳಿ ಇದ್ದ ಒಂದು ಕ್ರೇಟ್‌ನಷ್ಟು ಲೈಟ್ ಬಿಯರ್‌ನ್ನು ಕೈಗೆತ್ತಿಕೊಂಡ ಚಾಡ್, ಬೆಂಕಿಯ ಮೇಲೆ ಬಿಯರ್ ಸ್ಪ್ರೇ ಮಾಡಲು ಆರಂಭಿಸಿದರು.
ಕೊನೆಗೂ ಆತನ ಪ್ರಯತ್ನ ಫಲಗೂಡಿ, ಅಗ್ನಿಶಾಮಕ ಸಿಬ್ಬಂದಿ ಮನೆಗೆ ಆಗಮಿಸುವ ಮುನ್ನ ಬೆಂಕಿಯನ್ನು ನಂದಿಸುವಲ್ಲಿ ಆತ ಸಫಲರಾಗಿದ್ದಾರೆ.