ಜರ್ಮನಿಯ ಪಾಹೆಲ್ ಪ್ರಾಂತ್ಯದ ಗೋಧಿ ಹೊಲದಲ್ಲಿ ಇದ್ದಕ್ಕಿದ್ದಂತೆ ವೃತ್ತವೊಂದು ರಚನೆಯಾಗಿ ಎಲ್ಲರನ್ನೂ ಸೆಳೆಯುತ್ತಿದೆ.
ಹೊಲದ ಮಧ್ಯೆ ಬೆಳೆದು ನಿಂತ ಗೋಧಿ ಹುಲ್ಲು ವೃತ್ತಾಕಾರವಾಗಿ ಕಟಾವಾಗಿದೆ. ಡ್ರೋನ್ ಕ್ಯಾಮರಾ ಅಥವಾ ಬೇರೆ ಯಾವುದರ ಸಹಾಯದಿಂದಾಲೂ ಮೇಲಿನಿಂದ ಗಮನಿಸಿದರೆ, ಜ್ಯಾಮಿತಿ ಮಾದರಿಯಲ್ಲಿ ಹುಲ್ಲು ಕಟಾವಾಗಿದೆ.
ಇದನ್ನು ಕಂಡ ಸ್ಥಳೀಯರು, ಪ್ರವಾಸಿಗರು ವಿಚಿತ್ರ ವೃತ್ತದ ಸೃಷ್ಟಿ ಹೇಗಾಗಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಬಂದವರೆಲ್ಲರೂ ಬೆರಗುಗಣ್ಣಿನಿಂದಲೇ ನೋಡುತ್ತಿದ್ದು, ಮೊಬೈಲ್, ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಕುತೂಹಲದಿಂದಲೇ ನಿರ್ಗಮಿಸುತ್ತಿದ್ದಾರೆ.
ಜಮೀನಿನ ಮಾಲೀಕರೇ ಕುತೂಹಲ ಹುಟ್ಟಿಸಲು ಗೋಧಿ ಹುಲ್ಲನ್ನು ವೃತ್ತಾಕಾರದಂತೆ ಕತ್ತರಿಸಿರಬಹುದು ಎಂದು ಕೆಲವರು ಮಾತನಾಡಿಕೊಂಡರೆ, ಊರಿನ ಜನರೆಲ್ಲ ಸೇರಿ ಈ ಕೆಲಸ ಮಾಡಿರಬಹುದು ಎಂಬ ಮಾತುಗಳೂ ಇವೆ.
ಅಷ್ಟು ಸ್ಪಷ್ಟವಾದ ವೃತ್ತ ರಚನೆಯಾಗಿದೆ ಎಂದರೆ, ಅನ್ಯಗ್ರಹ ಜೀವಿಗಳು ಬಂದಿಳಿದಿರಬಹುದೆ ಎಂಬ ಹೊಸ ವಾದವೂ ನಡೆಯುತ್ತಿದೆ. ಒಟ್ಟಿನಲ್ಲಿ ಗೋಧಿ ಹೊಲದಲ್ಲಿ ಸೃಷ್ಟಿಯಾದ ವಿಚಿತ್ರ ವೃತ್ತ ವಿಸ್ಮಯದ ಗೂಡಾಗಿದೆ.