ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೋನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ ಔಷಧ ಬಳಸಿಕೊಂಡು ಕೊರೋನಾ ತಡೆಯುವ ಪ್ರಯತ್ನ ನಡೆದಿದೆ.
ಹೀಗಿರುವಾಗಲೇ ಆಶಾದಾಯಕ ಹೊಸ ಬೆಳವಣಿಗೆಯೊಂದು ನಡೆದಿದೆ ಇಂಗ್ಲೆಂಡ್ ಸಂಶೋಧಕರು ಬಳಸಿದ ಔಷಧದ ಮೂಲಕ ಕೊರೋನಾ ಗುಣಪಡಿಸಬಹುದಾಗಿದೆ ಎಂದು ಹೇಳಲಾಗಿದೆ. ಕೊರೋನಾ ಸೋಂಕಿತರಿಗೆ ಡೆಕ್ಸಾಮೆಥಾಸೋನ್(Dexamethasone) ನೀಡಿದಲ್ಲಿ ಗುಣಮುಖರಾಗುತ್ತಾರೆ ಎಂದು ಇಂಗ್ಲೆಂಡ್ ಸಂಶೋಧಕರು ಹೇಳಿದ್ದಾರೆ.
ಸಾವಿಗೆ ಸನಿಹವಾಗಿದ್ದ 5 ಸಾವಿರ ಕೊರೋನಾ ಸೋಂಕಿತರನ್ನು ಡೆಕ್ಸಾಮೆಥಾಸೋನ್ ಔಷಧ ನೀಡುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಂಡವೊಂದು ಡೆಕ್ಸಾಮೆಥಾಸೋನ್ ಔಷಧ ಬಳಸಿ ಪರಿಣಾಮಕಾರಿ ಅಧ್ಯಯನ ನಡೆಸಿ ವರದಿ ನೀಡಿದೆ.
ಈ ತಂಡದಲ್ಲಿದ್ದ ಪ್ರೊ. ಪೀಟರ್ ಹಾರ್ಬಿ ಡೆಕ್ಸಾಮೆಥಾಸೋನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದೆ. ಕೊರೋನಾ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಅಂದ ಹಾಗೇ, ಡೆಕ್ಸಾಮೆಥಾಸೋನ್ ಔಷಧ ವಿಶ್ವದೆಲ್ಲೆಡೆ 1960ರಿಂದ ಬಳಕೆ ಮಾಡಲಾಗುತ್ತಿದೆ. ಅಸ್ತಮಾ ಸೇರಿದಂತೆ ಹಲವು ರೋಗಿಗಳಿಗೆ ಇದನ್ನು ಬಳಸುತ್ತಿದ್ದು ಕೊರೋನಾಗೆ ಪರಿಣಾಮಕಾರಿಯಾಗಿದೆ. ಸದ್ಯ ಕೊರೋನಾ ತಡೆಗೆ ಹೆಚ್ಚಾಗಿ ಬಳಸುತ್ತಿರುವ ಹೈಡ್ರಾಕ್ಸಿಕ್ಲೊರೋಕ್ವಿನ್ ನಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.