ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ. ಈ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಜಾರಿ ಮಾಡಿರುವ ಕಾರಣ ಆರ್ಥಿಕ ಪರಿಸ್ಥಿತಿಯೂ ಅಲ್ಲೋಲಕಲ್ಲೋಲವಾಗಿದೆ.
ಕೊರೊನಾ ಮಹಾಮಾರಿಗೆ ಲಸಿಕೆ ಕಂಡು ಹಿಡಿಯಲು ಎಲ್ಲ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಇದರ ಮಧ್ಯೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಲಸಿಕೆ ಕಂಡು ಹಿಡಿಯುತ್ತಿರುವ ಬ್ರಿಟಿಷ್ ಫಾರ್ಮಾ ಕಂಪನಿ ಆಸ್ಟ್ರಾಝೆನೆಕಾ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ತಾವು ಸಿದ್ಧಪಡಿಸಿರುವ ಲಸಿಕೆ ಈಗಾಗಲೇ ಮಾನವರ ಮೇಲೆ ಪ್ರಯೋಗ ಮಾಡಲಾಗಿದ್ದು, ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ತಿಳಿಸಲಾಗಿದೆ.
ಈವರೆಗೆ 18 ರಿಂದ 55 ವರ್ಷದ ಕೊರೊನಾ ಸೋಂಕು ಪೀಡಿತರ ಮೇಲೆ ಲಸಿಕೆ ಪ್ರಯೋಗಿಸಲಾಗಿದ್ದು, ಮುಂದಿನ ಹಂತದಲ್ಲಿ ಮಕ್ಕಳು ಹಾಗೂ ವೃದ್ಧರ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನವೇ ಲಸಿಕೆಯ ಉತ್ಪಾದನೆಯನ್ನು ಆರಂಭಿಸಲಾಗುತ್ತಿದ್ದು, ಆಗಸ್ಟ್ ವೇಳೆಗೆ ಎಲ್ಲಾ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಯಶಸ್ಸು ಸಾಧಿಸಿದರೆ ಸೆಪ್ಟೆಂಬರ್ ವೇಳೆಗೆ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.