ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 1.37 ಲಕ್ಷ ಸಿಗರೇಟ್ ಸೇದಿ ಬಿಸಾಡಲಾಗುತ್ತಿದೆ. ವರ್ಷವೊಂದಕ್ಕೆ ಆರು ಟ್ರಿಲಿಯನ್ ಸಿಗರೇಟ್ ತುಂಡುಗಳು ಉತ್ಪತ್ತಿಯಾಗುತ್ತಿವೆ. ಇಷ್ಟು ಪ್ರಮಾಣದ ಸಿಗರೇಟ್ ಸೇವನೆ, ಅದರ ತುಣುಕು (ಫಿಲ್ಟರ್) ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಏನೆಲ್ಲ ಅಪಾಯ ಆಗುತ್ತಿದೆ ಗೊತ್ತೆ ?
ಸೇದಿ ಬಿಸಾಡಿದ ಸಿಗರೇಟಿನ ತುಂಡಿನಿಂದ 1.2 ದಶಲಕ್ಷ ಟನ್ ವಿಷಕಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯದ ನಿರ್ವಹಣೆ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಇವುಗಳ ಮರುಬಳಕೆಗೂ ಗಂಭೀರ ಚಿಂತನೆಗಳು ನಡೆದಿವೆ.
2001 ರಲ್ಲಿ ಅಮೆರಿಕಾದ ಟೆರ್ರಾ ಸೈಕಲ್ ಕಂಪನಿಯು ಸಿಗರೇಟ್ ತುಂಡುಗಳ ಪುನರ್ಬಳಕೆ ಪ್ರಯೋಗ ಮಾಡಿದೆ. ಫ್ರಾನ್ಸ್ ಸಹ ಸಿಗರೇಟ್ ತ್ಯಾಜ್ಯ ನಿರ್ವಹಣೆಗೆ ತನ್ನದೇ ಯೋಜನೆ ರೂಪಿಸಿದ್ದು, ಬ್ರಿಟನ್ ಕೂಡ ಫಿಲ್ಟರ್ ನಲ್ಲಿರುವ ಬೂದಿ, ಹತ್ತಿ, ತಂಬಾಕು, ಕಾಗದ ಇತ್ಯಾದಿಗಳನ್ನು ಪ್ರತ್ಯೇಕಗೊಳಿಸಿ, ಪೀಠೋಪಕರಣಕ್ಕೆ ಬೇಕಾದ ಶೀಟ್, ಅಲಂಕಾರಿಕ ಕುಂಡ ಇತ್ಯಾದಿಗಳಿಗೆ ಬಳಕೆ ಮಾಡುತ್ತಿದೆ.
ಇದೀಗ ಆಸ್ಟ್ರೇಲಿಯಾದ ರಾಯಲ್ ಮೆಲ್ಬೋರ್ನ್ ತಾಂತ್ರಿಕ ಶಿಕ್ಷಣ ಸಂಸ್ಥೆ (ಆರ್ಎಂಐಟಿ) ಒಂದು ಹೆಜ್ಜೆ ಮುಂದೆ ಹೋಗಿದ್ದು, ಇಟ್ಟಿಗೆ ತಯಾರಿಕೆಯಲ್ಲಿ ಈ ತ್ಯಾಜ್ಯ ಬಳಸಲು ಸಂಶೋಧನೆ ನಡೆಸಿದೆ. ಶೇ.1 ರಷ್ಟು ಸಿಗರೇಟ್ ಫಿಲ್ಟರ್ ಬಳಕೆಯಿಂದ ಇಟ್ಟಿಗೆ ತಯಾರಿಕೆಯಲ್ಲಿ ಶೇ.10 ರಷ್ಟು ಉತ್ಪಾದನಾ ವೆಚ್ಚ ಕಡಿಮೆ ಆಗಬಹುದೆಂದು ಅಂದಾಜಿಸಲಾಗಿದೆ.