ಕೋವಿಡ್-19 ಸಾಂಕ್ರಮಿಕದ ಕಾರಣ ಈ ವರ್ಷದ ಹಬ್ಬ/ಹಾಲಿಡೇ ಮೂಡ್ ಎಲ್ಲಾ ಹಾಳಾಗಿ ಹೋಗಿದೆ. ಇದೇ ವೇಳೆ ಬೆಲ್ಜಿಯಂನಲ್ಲಿ ಈ ಬಾರಿಯ ಕ್ರಿಸ್‌ಮಸ್ ಆಚರಣೆಯ ಮೇಲೆ ವಿಚಿತ್ರ ನಿಯಮಾವಳಿಯೊಂದನ್ನು ತರಲಾಗಿದೆ.
ಸ್ನೇಹಿತರು ಹಾಗೂ ಸಂಬಂಧಿಕರ ಗುಂಪಿನಲ್ಲಿ ಕ್ರಿಸ್‌ಮಸ್ ಆಚರಿಸಲು ಬೆಲ್ಜಿಯಂನಲ್ಲಿ ಅವಕಾಶ ಕೊಡಲಾಗಿದೆಯಾದರೂ, ಈ ಗುಂಪಿನಲ್ಲಿ ಯಾರಾದರೋ ಒಬ್ಬರು ಮಾತ್ರವೇ ಟಾಯ್ಲೆಟ್ ಬಳಸಲು ಸಾಧ್ಯವಿದೆ. ಹೌದು ನೀವು ಓದಿದ್ದು ಸರಿಯಾಗಿಯೇ ಇದೆ.
ಜನರು ಕ್ರಿಸ್‌ಮಸ್ ಆಚರಣೆ ಮಾಡಲು ತಮ್ಮ ನಾಲ್ವರು ಬಂಧುಗಳನ್ನು ಮನೆಗೆ ಕರೆಯಿಸಬಹುದಾಗಿದೆ. ಆದರೆ ಈ ವೇಳೆ ಬಂಧುಗಳಲ್ಲಿ ಒಬ್ಬರಿಗೆ ಮಾತ್ರವೇ ಟಾಯ್ಲೆಟ್ ಬಳಸಲು ಅವಕಾಶವಿದೆ. ಮಿಕ್ಕವರಿಗೆ ಮನೆಯೊಳಗೆ ಹೋಗಿ ಆಹಾರ/ಡ್ರಿಂಕ್ಸ್ ಮುಟ್ಟಲು ಅವಕಾಶವಿಲ್ಲ. ಹೀಗೆ ಯಾರಿಗಾದರೂ ಪ್ರಕೃತಿ ಕರೆಯ ಅವಸರವಿದ್ದಲ್ಲಿ ತಮ್ಮ ಮನೆಗೆ ವಾಪಸ್ ಹೋಗಬಹುದಾಗಿದೆ.
ನಾಲ್ಕು ಮಂದಿಯ ಗುಂಪಿನ ನಿಯಮ ಒಂದೆಡೆಯಾದರೆ, ಪಾರ್ಟಿ ಮಾಡುವ ವೇಳೆ ಇವರೆಲ್ಲಾ ಮನೆಯ ಒಳಗೆ ಸೇರುವಂತಿಲ್ಲ. ಪಾರ್ಟಿ ಮಾಡಬೇಕಾದಲ್ಲಿ ಆ ವ್ಯಕ್ತಿಗಳ ಮನೆಯಂಗಳ ದೊಡ್ಡದಿದ್ದು, ಉದ್ಯಾನವಿರಬೇಕಾಗುತ್ತದೆ. ಇಲ್ಲವಾದಲ್ಲಿ ಅತಿಥಿಗಳನ್ನು ತಮ್ಮ ಮನೆಗೆ ಕರೆಯುವ ಅವಕಾಶ ಸಿಗದು.