ಮದ್ಯ ಕುಡಿಯದಿದ್ದರೂ ಆತನಿಗೆ ನಶೆಯೇರುತ್ತದೆ. ಆತನ ಹೊಟ್ಟೆಯಲ್ಲೇ ಆಲ್ಕೋಹಾಲ್ ತಯಾರಾಗುತ್ತದೆ. ಇದು ಜೋಕ್ ಎಂದು ಭಾವಿಸಬೇಡಿ. ಅಚ್ಚರಿಯಾದರೂ ಸತ್ಯ.
ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ನ್ಯೂಜೆರ್ಸಿಯ 49 ವರ್ಷದ ಡ್ಯಾನಿ ಗೈನೆಟ್ಟೋ ಎಂಬ ವ್ಯಕ್ತಿಯನ್ನು ಪೊಲೀಸರು ಒಂದು ವರ್ಷದ ಹಿಂದೆ ವಶಕ್ಕೆ ಪಡೆಯುತ್ತಾರೆ.
ಆದರೆ, ವ್ಯಕ್ತಿ ತಾನು ಮದ್ಯ ಕುಡಿದಿಲ್ಲ ಎಂದು ಸಾರಿ ಸಾರಿ ಹೇಳುತ್ತಾನೆ. ನಶೆ ಪತ್ತೆ ಮಾಡುವ ಯಂತ್ರದಲ್ಲಿ ಪರಿಶೀಲನೆಗೆ ವಿರೋಧಿಸುತ್ತಾನೆ. ಆದರೂ ಕೇಳದ ಪೊಲೀಸರು ಆತನನ್ನು ಬಂಧಿಸಿ ಮೂರು ಬಾರಿ ಪರೀಕ್ಷೆಗೆ ಒಳಪಡಿಸುತ್ತಾರೆ. ಮದ್ಯ ಕುಡಿದ ಯಾವುದೇ ಲಕ್ಷಣ ಇರುವುದಿಲ್ಲ.
ಡ್ಯಾನಿ ತಿಂಗಳ ನಂತರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದಾಗ ಅವರಿಗೆ ಅವರ ಹೊಟ್ಟೆಯಲ್ಲೇ ಮದ್ಯ ಭಟ್ಟಿ ಇಳಿಯುತ್ತಿರುವ ವಿಷಯ ತಿಳಿಯಿತು. ಹೌದು, ಅತಿ ಅಪರೂಪವಾಗಿರುವ “ಅಟೋ ಬ್ರೇವರಿ ಸಿಂಡ್ರೋಮ್”(ಎಬಿಎಸ್) ಎಂಬ ಕಾಯಿಲೆ ಡ್ಯಾನಿ ಅವರನ್ನು ಬಾಧಿಸುತ್ತಿದೆ. ಈ ಕಾಯಿಲೆ ಇದ್ದವರಿಗೆ ಕಾರ್ಬೊ ಹೈಡ್ರೇಟ್ ಇರುವ ಯಾವುದೇ ವಸ್ತುವನ್ನು ಸೇವಿಸಿದರೂ ಅದು ಆಲ್ಕೋಹಾಲ್ ಆಗಿ ಬದಲಾಗುತ್ತದೆ. ಒಂದು ಸ್ಲೈಸ್ ಕೇಕ್ ಸೇವಿಸಿದರೆ ನಾಲ್ಕು ಪಟ್ಟು ಮದ್ಯ ಕುಡಿದಷ್ಟು ನಶೆಯ ಪರಿಣಾಮ ಉಂಟಾಗುತ್ತದೆ.
ಡ್ಯಾನಿ ಪರೀಕ್ಷೆ ಮಾಡಿಸಿ ಒಂದು ತಿಂಗಳಿಗೆ ಪೊಲೀಸರು ಮತ್ತೆ ಅವರನ್ನು ಬಂಧಿಸಿದರು. ಆದರೆ, ಡ್ಯಾನಿ ಅವರಿಗೆ ತಮ್ಮ ದೇಹದಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ತಿಳಿದಿದ್ದರಿಂದ ಪೊಲೀಸರಿಗೆ ಎಲ್ಲ ವಿವರ ದಾಖಲೆ ನೀಡಿದ್ದರು. ಪೊಲೀಸರು ಅವರ ಮೇಲಿದ್ದ ಎಲ್ಲ ಪ್ರಕರಣಗಳನ್ನು ತೆಗೆದು ಹಾಕಿದ್ದಾರೆ.
ಡ್ಯಾನಿ ಅವರು ಈಗ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಬೊ ಹೈಡ್ರೇಟ್ ಇರುವ ಕೇಕ್, ಫಿಜಾ ಮುಂತಾದ ಎಲ್ಲ ಆಹಾರಗಳನ್ನು ಸೇವಿಸುವುದನ್ನು ಬಿಟ್ಟಿದ್ದಾರೆ. ಮೀನು, ಹಸಿರು ಸೊಪ್ಪುಗಳನ್ನು ತಿನ್ನುತ್ತಿದ್ದಾರೆ.
“ನಾನು ಈ ವಿಷಯವನ್ನು ಹೇಳಿದರೆ, ಯಾರೂ ನಂಬುವುದಿಲ್ಲ. ನೀನು ಜೋಕ್ ಮಾಡುತ್ತಿದ್ದೀಯ ಎಂದೇ ಹೇಳುತ್ತಾರೆ” ಎಂಬುದು ಡ್ಯಾನಿ ಅವರ ಅನುಭವ. ಈ ವಿಷಯ ತಿಳಿದ ಹಲವು ‘ನಶೆ’ ಪ್ರಿಯರು ನಮಗೆ ಈ ರೋಗ ಬರಲಪ್ಪ ಎಂದು ಕೇಳಿಕೊಂಡಿದ್ದಾರಂತೆ….!