ಇನ್ನೆರಡೇ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಅದ್ಧೂರಿ ಸಮಾರಂಭಕ್ಕೆ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದೊಂಬಿಯ ಕಾರಣದಿಂದ ಭಾರೀ ಭದ್ರತೆ ಒದಗಿಸಲಾಗಿದೆ.
ತಮಿಳು ನಾಡು ಮೂಲದ ತಾಯಿ ಕಡೆಯಿಂದ ಭಾರತೀಯ ನಂಟು ಹೊಂದಿರುವ ಕಮಲಾ ಪ್ರಮಾಣವಚನ ಸ್ವೀಕರಿಸುತ್ತಿರುವ ಕಾರಣ ಸಮಾರಂಭಕ್ಕೆ ಸ್ವಲ್ಪ ದೇಸೀ ಟಚ್ ಸಹ ಕೊಡಲಾಗುತ್ತಿದೆ. ಶ್ವೇತಭವನದಲ್ಲಿ ಸಾಂಪ್ರದಾಯಿಕ ಕೋಲಮ್ ರಂಗೋಲಿಯನ್ನು ಬಿಡುವ ಮೂಲಕ ಅಂಗಳಕ್ಕೆ ದೇಸೀ ಮೆರುಗು ಕೊಡಲಾಗುತ್ತಿದೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಮೀಸಲಾಗಿರುವ ’ಇಂಡಿಯಾಸ್ಪೋರಾ’ ಎಂಬ ಪೇಜ್ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ. ತಮಿಳುನಾಡಿನ ಸಾಂಪ್ರದಾಯಿಕ ರಂಗೋಲಿಯಾದ ಕೋಲಮ್ ಅನ್ನು ಮನೆಯ ಮುಂದೆ ಹಾಕಿದಾಗ ಕುಟುಂಬಕ್ಕೆ ಆರೋಗ್ಯ ಹಾಗೂ ಸಿರಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.