ವಾಷಿಂಗ್ಟನ್: ಪ್ರಾಣಿ ಪ್ರಪಂಚವೇ ವಿಶಿಷ್ಟ. ಅದರಲ್ಲೂ ಅವುಗಳ ಜೀವನ ಶೈಲಿಯ ಕುರಿತು ಅರಿಯಲು ಹೋದರೆ, ಆಶ್ಚರ್ಯಕರ ವಿಷಯಗಳು ಹೊರ ಬೀಳುತ್ತವೆ. ಅಮೆರಿಕಾ ವಾಷಿಂಗ್ಟನ್ ನಲ್ಲಿ ಕರಡಿಯೊಂದು ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ. ಅದು ಅದೇಕೆ ಹಾಗೆ ಮಾಡುತ್ತದೆ ಎಂದು ಹುಡುಕಲು ಹೋದರೆ, ಕುತೂಹಲಕಾರಿ ಅಂಶಗಳು ಹೊರ ಬಿದ್ದಿವೆ.
ಕರಡಿಯೊಂದು ತನ್ನ ಕಾಲುಗಳನ್ನು ಎತ್ತಿಟ್ಟು ನೃತ್ಯ ಮಾಡುತ್ತ ತನ್ನ ಹಿಂಭಾಗವನ್ನು ಬಿದ್ದ ಮರದ ದಿಮ್ಮಿಗಳಿಗೆ ಉಜ್ಜುವ ವಿಡಿಯೋ ವೈರಲ್ ಆಗಿದೆ. ಕೆಲವು ಬಾರಿ ಅವು ಇನ್ನೂ ಹೆಚ್ಚು ಉದ್ವೇಗಗೊಂಡು ಮರಗಳನ್ನು ಮುರಿದು ಹಾಕುವುದೂ ಇದೆಯಂತೆ.
ಕರಡಿಗಳು ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಸಂಗಾತಿಗೆ ತನ್ನ ಅಸ್ತಿತ್ವ ತಿಳಿಸಲು ಆ ರೀತಿ ಮಾಡುತ್ತವೆ. ಅವು ವಿಶಿಷ್ಟ ಗಂಧವನ್ನೂ ಸೂಸುತ್ತವೆ ಎಂದು ಉತ್ತರ ಅಮೇರಿಕಾ ಕರಡಿ ಕೇಂದ್ರ ಹೇಳಿದೆ. ಅಮೆರಿಕಾದ ಕಪ್ಪು ಕರಡಿಗಳಲ್ಲಿ ಕೆರ್ಮುಡೆ ಎಂಬ ಉಪ ಪ್ರಭೇದ ಕರಡಿಗಳು ವಿಶಿಷ್ಟವಾಗಿರುತ್ತವೆ. ಹತ್ತರಲ್ಲಿ ಒಂದು ಕರಡಿ ಬಿಳಿ ಅಥವಾ ಕೆನೆ ಬಣ್ಣದ ಕೂದಲು ಅಥವಾ ತುಪ್ಪಳ ಹೊಂದಿರುತ್ತದೆ. ಇವು ಅಮೆರಿಕಾದಲ್ಲಿ ಸಂರಕ್ಷಿತ ಪ್ರಾಣಿಯಾಗಿದೆ.